– ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ
ಮಡಿಕೇರಿ: ಶುಕ್ರವಾರದಂದು ಬಂದ್‍ನಿಂದ ದೂರ ಸರಿದಿದ್ದ ಕಾವೇರಿ ತವರು ಕೊಡಗಿನಲ್ಲಿ ಇವತ್ತು ಪ್ರತಿಭಟನೆ ತೀವ್ರಗೊಂಡಿತ್ತು. ಕುಶಾಲನಗರದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ, ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.
ಹಾರಂಗಿಯಿಂದ ಹರಿಸಲಾಗುತ್ತಿರೋ ನೀರನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಸರ್ಕಾರ ನಮ್ಮ ರಾಜ್ಯದ ಜನರಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರೋದು ಖಂಡನೀಯ. ಕೂಡಲೇ ನೀರು ಸ್ಥಗಿತಗೊಳಿಸಿ ನಮ್ಮ ಬೆಳೆ ಉಳಿಸಲಿ. ಇಲ್ಲವಾದ್ರೆ ಎಕರೆಗೆ ಐವತ್ತು ಸಾವಿರ ರೂ. ಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಮೈಸೂರಿನ ಕೆ.ಆರ್.ನಗರದ ಪಿರಿಯಾಪಟ್ಟಣ ತಾಲೂಕಿನ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತಿದೆ. ಆದ್ರೆ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಜಲಶಯದಲ್ಲಿ ಕೇವಲ 5 ಟಿಎಂಸಿ ನೀರು ಮಾತ್ರ ಇದೆ. ಮಾಮೂಲಿಯಂತೆ ಈ ಸಮಯದಲ್ಲಿ 8 ಟಿಎಂಸಿ ನೀರಿರುತ್ತಿತ್ತು. ಹೀಗಾಗಿ ಹಾರಂಗಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಈ ಭಾಗದ ರೈತರಿಗೆ ದ್ರೋಹ ಮಾಡಿದಂತಾಗುತ್ತದೆ. ಜಲಾಶಯವನ್ನೆ ನಂಬಿ ಈಗಾಗಲೇ ರೈತರು ಬಿತ್ತನೆ ಮಾಡಿ ಮುಗಿಸಿದ್ದಾರೆ. ಆದ್ರೆ ಮುಂದೆ ಬೆಳೆಗೆ ನೀರಿಲ್ಲದಿದ್ದರೆ ಬೆಳೆ ನಷ್ಟವಾಗಲಿದೆ. ಕೂಡಲೆ ನೀರು ಹರಿಸೋದನ್ನ ಸ್ಥಗಿತಗೊಳಿಸಿ ಎಂದು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್, ತಮಿಳುನಾಡಿಗೆ ನೀರು ಹರಿಸುತ್ತಿರೋ ಸರ್ಕಾರದ ನಿರ್ಣಯಕ್ಕೆ ಕಿಡಿ ಕಾರಿದರು. ರೈತರ ಹಿತದೃಷ್ಟಿಯಿಂದ ಕೂಡಲೆ ತಮಿಳುನಾಡಿಗೆ ನೀರು ಹರಿಸೋದನ್ನ ನಿಲ್ಲಿಸಲಿ. ಸೆಪ್ಟೆಂಬರ್ 14ಕ್ಕೆ ಸರ್ಕಾರ ವಿಶೇಷ ಅಧಿವೇಶನ ಕರೆದಿದ್ದು ರೈತರ ಬೇಡಿಕೆಗಳ ವಿಷಯ ಪ್ರಸ್ತಾಪಿಸೋದಾಗಿ ಹೇಳಿದ್ರು. ಕೂಡಲೆ ಪ್ರಧಾನಿಯವರೂ ಕೂಡ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
The post ಕಾವೇರಿ ತವರು ಕೊಡಗಿನಲ್ಲಿ ಇಂದು ತೀವ್ರಗೊಂಡ ಪ್ರತಿಭಟನೆ appeared first on Kannada Public tv.