ಬೆಂಗಳೂರು: ಕಾವೇರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೈ ಜೋಡಿಸಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಇಂದಿನ ಕರ್ನಾಟಕ ಬಂದ್‍ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಬೆಂಬಲ ನೀಡಿತ್ತು.
ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾವೇರಿಗಾಗಿ ಹೋರಾಟ ಕೇವಲ ಮಂಡ್ಯ, ಬೆಂಗಳೂರಿನಲ್ಲಿ ಮಾತ್ರವಲ್ಲದೇ ಅಖಂಡ ಕರ್ನಾಟಕದಲ್ಲಿ ನಡೆಯಬೇಕು, ಕೇವಲ ಬೆಂಗಳೂರಿಗರು ಮಾತ್ರವಲ್ಲದೇ ಹುಬ್ಬಳ್ಳಿ ಸೇರಿದಂತೆ ಉತ್ತರಕರ್ನಾಟಕದ ಜನತೆಯೂ ಕೈ ಜೋಡಿಸಬೇಕು ಎಂದರು.
ಇನ್ಮುಂದೆ ವೋಟ್ ಹಾಕಿ ಯಾವುದೇ ಸರ್ಕಾರವನ್ನ ಆಯ್ಕೆ ಮಾಡಬೇಕಾದ್ರೆ ಯೋಚನೆ ಮಾಡಿ, ಯಾರಿಗೆ ಹೋರಾಟ ಮಾಡುವ ತಾಕತ್ತಿರುತ್ತೋ ಅಂತವರಿಗೆ ನಿಮ್ಮ ಮತ ಹಾಕಿ, ಈಗ ಕಾವೇರಿಗಾಗಿ ನಾವು ನೀವು ಹೋರಾಟ ಮಾಡುತ್ತಿದ್ದೇವೆ, ಇಲ್ಲಿ ಯಾವುದೇ ಜನಪ್ರತಿನಿಧಿಗಳು ಬಂದಿಲ್ಲ, ಅವರೆಲ್ಲ ಬಿಸ್ಲೆರಿ ನೀರು ಕುಡಿಯುತ್ತಾರೆ ಆದ್ರೆ ನಮಗೆ ಕುಡಿಯೋಕೆ ನೀರಿಲ್ಲ.
ರಾಜ್ಯದಲ್ಲಿರುವ ತಮಿಳರು ಕೂಡ ಹೋರಾಟಕ್ಕೆ ಬರಬೇಕು, ಅವರು ಕೂಡ ಇಲ್ಲಿಯ ನೀರನ್ನೇ ಕುಡಿಯೋದು, ಇಲ್ಲಿಯ ಅನ್ನವನ್ನೇ ತಿನ್ನೋದು, ಅವರು ಬರಬೇಕು ಹೋರಾಟಕ್ಕೆ. ಯಾವುದೇ ಹೋರಾಟವಾದ್ರೂ ಚಿತ್ರರಂಗ ಜೊತೆಗಿರುತ್ತೆ, ಮಾತಿಗೂ ಮುಂಚೆ ಕಲಾವಿದರೂ ಬರಲ್ಲ ಅಂತ ಹೇಳಬೇಡಿ, ಕೆಲವು ಕಲಾವಿದರೂ ಬೇರೆಡೆಗೆ ಹೋಗಿರುತ್ತಾರೆ, ಇಲ್ಲಿ ಒಬ್ಬ ಕಲಾವಿದ ಬಂದ್ರೂ ಇಡೀ ಚಿತ್ರರಂಗವೇ ಬಂದಂತೆ ಎಂದು ಹೇಳಿದರು.
ಇದೇ ವೇಳೆ ಕೆಲವು ಪ್ರತಿಭಟನಾಕಾರರು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿದ್ದನ್ನ ನೋಡಿದ ಶಿವಣ್ಣ ಸಿಟ್ಟಿಗೆದ್ದು, ಇಲ್ಲಿ ನಾವು ನೀವು ಬಂದಿರುವುದು ಸೆಲ್ಫೀ ತೆಗೆಸಿಕೊಳ್ಲುವುದಕ್ಕಲ್ಲ, ಹೋರಾಟ ಮಾಡುವುದಕ್ಕೆ, ಅದಕ್ಕೆಂದೆ ಇನ್ನೊಂದು ದಿನ ನಿಗದಿ ಮಾಡೋಣ, ಯಾರು ನಮಗೆ ಜೈ ಎನ್ನುವುದು ಬೇಕಾಗಿಲ್ಲ, ಕಾವೇರಿಗಾಗಿ ಕರ್ನಾಟಕ್ಕಾಗಿ ಜೈ ಎಂದು ಹೇಳಿ, ಭಾಷೆ ಹಾಗೂ ನೀರು ಅಂತ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
The post ಕಾವೇರಿಗಾಗಿ ಅಖಂಡ ಕರ್ನಾಟಕವೇ ಒಂದಾಗಬೇಕು: ಶಿವಣ್ಣ appeared first on Kannada Public tv.