ರಾಲೇಗಾನ್ ಸಿದ್ಧಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲಿದ್ದ ಎಲ್ಲ ನಂಬಿಕೆ ಹೊರಟು ಹೋಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಸೆಕ್ಸ್ ಸೀಡಿ ಪ್ರಕರಣದಲ್ಲಿ ಆಪ್‍ನಿಂದ ಉಚ್ಚಾಟನೆಗೊಂಡ ಸಚಿವ ಸಂದೀಪ್ ಕುಮಾರ್ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಣ್ಣಾ ಹಜಾರೆ, ಕೇಜ್ರಿವಾಲ್ ಸಹೋದ್ಯೋಗಿಗಳೇ ವಂಚನೆಯಲ್ಲಿ ಭಾಗಿಯಾಗುತ್ತಿದ್ದಾರೆ. ನನ್ನ ಜೊತೆ ಇದ್ದಾಗ ಆತ(ಕೇಜ್ರಿವಾಲ್) ಗ್ರಾಮ ಸ್ವರಾಜ್ ಪುಸ್ತಕ ಬರೆದಿದ್ದ. ನನಗೆ ಬಹಳ ಬೇಸರವಾಗುತ್ತಿದ್ದು ಗ್ರಾಮ ಸ್ವರಾಜ್ ಅಂದರೆ ಇದೇನಾ ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಷ ಸ್ಥಾಪನೆ ಮಾಡುವಾಗ ಕೇಜ್ರಿವಾಲ್‍ಗೆ ನಾನು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದೆ. ಪಕ್ಷದ ಸಂಘಟನೆಗೆ ವಿಶ್ವದೆಲ್ಲೆಡೆ ಪ್ರಚಾರಕ್ಕೆ ಹೋಗಬೇಕಾಗುತ್ತದೆ. ಭಾರತದಲ್ಲೂ ಸಾಕಷ್ಟು ಮೆರವಣಿಗೆಗಳನ್ನು ಮಾಡಬೇಕಾಗುತ್ತದೆ. ಈ ವೇಳೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವ್ಯಕ್ತಿಗಳು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ಹೇಗೆ ನಿರ್ಧಾರ ಮಾಡುತ್ತೀಯಾ ಎಂದು ಪ್ರಶ್ನಿಸಿದ್ದೆ. ಈ ಪ್ರಶ್ನೆಗೆ ಕೇಜ್ರಿವಾಲ್ ಯಾವುದೇ ಉತ್ತರ ನೀಡಿರಲಿಲ್ಲ. ಈಗ ಇದರ ಅನುಭವವಾಗುತ್ತಿದ್ದು ಯಾವುದೇ ಪಕ್ಷದ ನಾಯಕನಾದರೂ ತನ್ನ ಜೊತೆ ಬರುವ ವ್ಯಕ್ತಿಯ ಗುಣ ನಡತೆ ಪರಿಶೀಲಿಸುವುದು ಅಗತ್ಯ ಎಂದು ಅವರು ಹೇಳಿದರು.
ಹೊಸ ರಾಜಕೀಯ ಶಕ್ತಿಯಾಗಿ ಕೇಜ್ರಿವಾಲ್ ಬೆಳೆದು ಉನ್ನದ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತಾನೆ ಎಂದು ನಾನು ನಂಬಿದ್ದೆ. ಆದರೆ ಈಗ ಆತನ ಸಹೋದ್ಯೋಗಿಗಳೇ ಜೈಲಿಗೆ ಹೋಗುತ್ತಿದ್ದರೆ ಕೆಲವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
The post ಕೇಜ್ರಿವಾಲ್ ಮೇಲಿಟ್ಟಿದ್ದ ಎಲ್ಲ ನಂಬಿಕೆ ಹೊರಟು ಹೋಗಿದೆ: ಅಣ್ಣಾ ಹಜಾರೆ appeared first on Kannada Public tv.