ಸಿಡ್ನಿ: ಹೆಬ್ಬಾವುಗಳನ್ನ ನೋಡಿದ್ರೆ ಎಂತಹವರಿಗೂ ಭಯವಾಗುತ್ತೆ. ಅದೇ ಹೆಬ್ಬಾವು ನಿಮ್ಮ ಮನೆಯ ಚಾವಣಿ ಮೇಲಿದ್ರೆ ಹೇಗಾಗಬೇಡ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಿವಾಸಿಯೊಬ್ಬರ ಮನೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ.
ಎರಡು ದೈತ್ಯ ಹೆಬ್ಬಾವುಗಳು ಮನೆಯ ಚಾವಣಿಯ ಮೇಲೆ ಜೋರಾಗಿ ಕಿರುಚುತ್ತಾ ಕಾಳಗ ಮಾಡೋದನ್ನ ಮನೆಯ ನಿವಾಸಿ ವಿಡಿಯೋ ಮಾಡಿದ್ದಾರೆ. ಸನ್‍ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ.
ಹಾವುಗಳ ಮಿಲನದ ಕಾಲ ಶುರುವಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಗಂಡು ಹಾವುಗಳು ಕಾದಾಡುವ ಇಂತಹ ದೃಶ್ಯ ಸಾಮಾನ್ಯ ಅಂತ ಫೇಸ್‍ಬುಕ್ ಪೇಜ್‍ನಲ್ಲಿ ಹೇಳಿದ್ದಾರೆ.
ಹಾವುಗಳು ಈ ರೀತಿ ಕಾದಾಡೋದ್ರಿಂದ ಕೊನೆಗೆ ಏನಾಗುತ್ತದೆ ಅನ್ನೋ ಪ್ರಶ್ನೆಗೆ ಉರಗ ತಜ್ಞರು ಉತ್ತರಿಸಿದ್ದಾರೆ. ಈ ಕಾಳಗದಲ್ಲಿ ಹಾವು ಒಂದಕ್ಕೊಂದು ಕಚ್ಚುವುದಿಲ್ಲ. ಯಾರು ಶಕ್ತಿಶಾಲಿ ಎಂದು ಸಾಬೀತು ಮಾಡುವ ಕಾಳಗ ಇದು. ಆದ್ದರಿಂದ ಒಂದನ್ನೊಂದು ಪದೇ ಪದೇ ಕೆಳಗೆ ತಳ್ಳುತ್ತಾ ಮೇಲೆ ನಿಲ್ಲಲು ಯತ್ನಿಸುತ್ತವೆ. ಇದರಲ್ಲಿ ಜಯಶಾಲಿಯಾದ ಹಾವು ಹತ್ತಿರದಲ್ಲಿರುವ ಯಾವುದಾದರೂ ಹೆಣ್ಣು ಹಾವಿನೊಂದಿಗೆ ಮಿಲನ ಮಾಡಲು ಹಕ್ಕು ಪಡೆಯುತ್ತದೆ. ಸೋತ ಹಾವು ಬೇರೆಡೆ ಹೋಗುತ್ತದೆ. ಕಾಳಗದಲ್ಲಿ ಹಾವುಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಅಂತ ತಿಳಿಸಿದ್ದಾರೆ.
ಈ ವಿಡಿಯೋ ಈವರೆಗೂ 62 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
The post ಚಾವಣಿ ಮೇಲೆ ಹೆಬ್ಬಾವುಗಳ ಭಾರೀ ಕಾಳಗ; ವಿಡಿಯೋ ನೋಡಿ appeared first on Kannada Public tv.