ಉಚಿತವಾಗಿ ನೀಡಿ, ಯಾವುದೇ ಜಾಹೀರಾತುಗಳನ್ನು ಪ್ರಸಾರ ಮಾಡದೇ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಆ್ಯಪ್ ವಾಟ್ಸಪ್ ಈಗ ಜಾಹೀರಾತನ್ನು ಹಿಂದಿನ ಬಾಗಿಲಿನಿಂದ ಪ್ರಸಾರ ಮಾಡಲು ಮುಂದಾಗಿದೆ. ಜಾಹೀರಾತಿನ ಮೂಲಕ ಆದಾಯ ಹೆಚ್ಚಿಸಲು ಫೇಸ್‍ಬುಕ್ ಮುಂದಾಗಿದ್ದು ಅದಕ್ಕಾಗಿ ತನ್ನ ಬಳಕೆದಾರರ ನಂಬರ್‍ಗಳನ್ನು ನೀಡುವುದಾಗಿ ವಾಟ್ಸಪ್ ಹೇಳಿಕೊಂಡಿದೆ.
ಈ ಜಾಹೀರಾತಿಗಾಗಿ ತನ್ನ ಪ್ರೈವೆಸಿ ಸೆಟ್ಟಿಂಗ್ಸ್‍ನಲ್ಲಿ ವಾಟ್ಸಪ್ ಬದಲಾವಣೆ ಮಾಡಿಕೊಂಡಿದ್ದು, ಬಳಕೆದಾರರ ನಂಬರ್‍ಗಳನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಳ್ಳಲು ಮುಂದಾಗಿದೆ. ವಾಟ್ಸಪ್‍ನ ಈ ನಿರ್ಧಾರ ಪ್ರಕಟಗೊಂಡ ಬಳಿಕ ಎಚ್ಚೆತ್ತ ಜನ, ವಾಟ್ಸಪ್ ಬಳಕೆದಾರರಿಗೆ ಮೋಸ ಮಾಡುತ್ತಿದೆ. ಹೀಗಾಗಿ ನಿಮ್ಮ ವಾಟ್ಸಪ್ ನಂಬರ್ ಅನ್ನು ಎಫ್‍ಬಿಯಲ್ಲಿ ಬಳಸಲು ಅನುಮತಿ ನೀಡಬೇಡಿ. ಸೆಟ್ಟಿಂಗ್ಸ್, ಅಕೌಂಟ್‍ಗೆ ಹೋಗಿ “ಶೇರ್ ಮೈ ವಾಟ್ಸಪ್ ಅಕೌಂಟ್ ಇನ್ಫಾರ್ಮೆಶನ್ ವಿತ್ ಫೇಸ್‍ಬುಕ್….”ನಲ್ಲಿರುವ ಬಟನ್ ಸ್ವಿಚ್ ಆಫ್ ಮಾಡಿ ಎಂದು ಮಸೇಜ್ ಮಾಡುತ್ತಿದ್ದಾರೆ.
ಹೀಗಾಗಿ ಇಲ್ಲಿ ವಾಟ್ಸಪ್‍ನ ಹೊಸ ಕಾರ್ಯತಂತ್ರಕ್ಕೆ ನೀವು ಒಪ್ಪಿಗೆ ನೀಡಿದರೆ ಏನಾಗುತ್ತದೆ? ತನ್ನ ಲಾಭಕ್ಕಾಗಿ ಎಲ್ಲಿ ಮತ್ತು ಹೇಗೆ ಫೇಸ್‍ಬುಕ್ ತನ್ನ ವಾಟ್ಸಪ್ ಬಳಕೆದಾರರ ಡೇಟಾಗಳನ್ನು ಬಳಸುತ್ತದೆ ಎನ್ನುವುದನ್ನು ವಿವರಿಸಲಾಗಿದೆ.
1 2009ರಲ್ಲಿ ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 2014ರಲ್ಲಿ ಫೇಸ್‍ಬುಕ್ ಖರೀದಿ ಮಾಡಿದೆ. ವಾಟ್ಸಪ್ ಇದುವರೆಗೂ ಯಾವುದೇ ಜಾಹೀರಾತನ್ನು ತನ್ನ ಆಪ್‍ನಲ್ಲಿ ತೋರಿಸಿಲ್ಲ. ಆದರೆ ಈಗ ವಾಟ್ಸಪ್ ಬಳಕೆದಾರರ ಮೂಲಕ ಮಾತೃ ಸಂಸ್ಥೆ ಫೇಸ್‍ಬುಕ್ ಜಾಹೀರಾತು ಮತ್ತು ತನ್ನ ಪ್ರಚಾರ ಹೆಚ್ಚಿಸಲು ಪ್ರೈವೆಸಿ ಸೆಟ್ಟಿಂಗ್ಸ್ ನಲ್ಲಿ ಬದಲಾವಣೆಯನ್ನು ತಂದಿದೆ. ಇದರ ಅರ್ಥ ವಾಟ್ಸಪ್‍ನಲ್ಲಿ ಜಾಹೀರಾತುಗಳನ್ನೇ ತೋರಿಸದೇ, ವಾಟ್ಸಪ್ ಬಳಕೆದಾರರ ಕಾಂಟಾಕ್ಟ್ ಗಳನ್ನು ಬಳಸಿ ಫೇಸ್‍ಬುಕ್‍ನಲ್ಲಿ ಆದಾಯ ಹೆಚ್ಚಿಸುವುದು ಜುಕರ್‍ಬರ್ಗ್ ಕಂಪೆನಿಯ ಉದ್ದೇಶ.
2. ವಾಟ್ಸಪ್ ಬಳಕೆದಾರರ ಕಾಂಟಾಕ್ಟ್ ಗಳನ್ನು ಬಳಸಿ ಫೇಸ್‍ಬುಕ್ ಹೇಗೆ ಆದಾಯ ಹೆಚ್ಚಿಸುತ್ತದೆ ಎನ್ನುವುದನ್ನು ನೀವು ಕೇಳಬಹುದು. ಇದಕ್ಕೆ ಉತ್ತರ ಸಿಂಪಲ್. ಫೇಸ್‍ಬುಕ್‍ನಲ್ಲಿ ನೀವು ಈಗ ನೋಡಬಹುದು. ನೀವು ಫ್ರೆಂಡ್ ಆಗದೇ ಇದ್ದರೂ ನಿಮ್ಮ ದೂರದ ಸಂಬಂಧಿ ಅಥವಾ ಪರಿಚಯದ ಸ್ನೇಹಿತರ ಪ್ರೊಫೈಲ್ ಕಾಣಿಸುತ್ತದೆ. ಈ ಪ್ರೊಫೈಲ್ ನೋಡಿದ ಕೂಡಲೇ, ಓ ಇವರು ನಮ್ಮ ಪರಿಚಯದವರು ಎಂದು ತಿಳಿದು ನೀವು ಫ್ರೆಂಡ್ ಆಗುತ್ತೀರಿ. ಇದನ್ನೇ ವಾಟ್ಸಪ್ ಅನ್ವಯಿಸಿದರೆ ನಿಮ್ಮ ಕಾಂಟಾಕ್ಟ್ ಗಳಲ್ಲಿರುವ ಬಹುತೇಕ ವ್ಯಕ್ತಿಗಳು ಫೇಸ್‍ಬುಕ್‍ನಲ್ಲಿ ಫ್ರೆಂಡ್ ಆಗಿರುವುದಿಲ್ಲ. ಆದರೆ ಸೆಟ್ಟಿಂಗ್ಸ್ ನಲ್ಲಿ ವಾಟ್ಸಾಪ್ ಕಾಂಟಾಕ್ಟ್ ಶೇರ್ ಮಾಡಲು ಅನುಮತಿ ನೀಡಿದ ಕಾರಣ ವಾಟ್ಸಪ್‍ನಲ್ಲಿರುವ ಸ್ನೇಹಿತರ ಪ್ರೊಫೈಲ್‍ಗಳು( ಅವರು ಅನುಮತಿ ನೀಡಿದರೆ ಮಾತ್ರ) ಇನ್ನು ಮುಂದೆ ನಿಮ್ಮ ಎಫ್‍ಬಿ ವಾಲ್‍ನಲ್ಲಿ ಕಾಣುತ್ತದೆ. ಇದರಿಂದಾಗಿ ಫೇಸ್‍ಬುಕ್ ಬಳಕೆದಾರರ ಸಂಖ್ಯೆ, ಬಳಕೆಯ ಸಮಯ ಹೆಚ್ಚಾಗುತ್ತದೆ.
3.ಕಂಪೆನಿಗಳು ಪೇಜ್‍ಗಳ ಲೈಕ್ ಹೆಚ್ಚಿಸಲು ಹಣವನ್ನು ಫೇಸ್‍ಬುಕ್‍ಗೆ ಪಾವತಿ ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಿರುವ ವಿಚಾರ. ಈ ಪೇಜನ್ನು ನೀವು ಲೈಕ್ ಮಾಡಿದ್ದರೆ, ಆ ಪೇಜ್ ನಿಮ್ಮ ಸ್ನೇಹಿತರ ವಾಲ್‍ನಲ್ಲೂ ಕಾಣಿಸಿ ಅವರಲ್ಲೂ ಈ ಪೇಜ್‍ಗೆ ಲೈಕ್ ಮಾಡುವಂತೆ ಕೇಳಿಕೊಳ್ಳುತ್ತದೆ. ಈಗ ನಿಮ್ಮ ವಾಟ್ಸಪ್ ಸ್ನೇಹಿತ ಅಥವಾ ಗ್ರೂಪ್‍ನ ಸದಸ್ಯರು ಯಾವುದೋ ಒಂದು ಪೇಜನ್ನು ಲೈಕ್ ಮಾಡಿದ್ದರೆ, ಆ ಪೇಜ್ ನಿಮಗೆ ಇಷ್ಟವಾಗುತ್ತದೆ ಎಂದು ಫೇಸ್‍ಬುಕ್ ತಿಳಿದುಕೊಂಡು ನಿಮ್ಮ ವಾಲ್‍ನಲ್ಲೂ ಪೇಜ್ ತೋರಿಸುತ್ತದೆ.
4.ನೀವು ಈಗ ಕ್ರೋಮ್ ಬ್ರೌಸರ್‍ನಲ್ಲಿ ಯಾವುದೋ ಮೊಬೈಲ್, ಫ್ಯಾಶನ್‍ಗೆ ಸಂಬಂಧಿಸಿದ ಪೇಜ್ ಓಪನ್ ಮಾಡಿದ್ದರೆ, ಮುಂದೆ ನೀವು ಯಾವುದೇ ಪುಟವನ್ನು ತೆರೆದಾಗ ಮೊಬೈಲ್, ಫ್ಯಾಶನ್‍ಗೆ ಸಂಬಂಧಿಸಿದ ಜಾಹೀರಾತುಗಳು ವೆಬ್‍ಸೈಟ್‍ನಲ್ಲಿ ಕಾಣುತ್ತದೆ. ಇದೇ ರೀತಿಯ ತಂತ್ರವನ್ನು ಫೇಸ್‍ಬುಕ್ ಮಾಡಿದ್ದು ಹೆಚ್ಚಾಗಿ ನೀವು ವಾಟ್ಸಪ್‍ನಲ್ಲಿ ಚಾಟ್ ಮಾಡುತ್ತಿರುವ ಸ್ನೇಹಿತರು ಯಾವ ಜಾಹೀರಾತು ಕ್ಲಿಕ್ ಮಾಡುತ್ತಾರೋ ಆ ಜಾಹೀರಾತು ಇನ್ನು ಮುಂದೆ ನಿಮ್ಮ ವಾಲ್‍ನಲ್ಲೂ ಕಾಣಬಹುದು.(ಕ್ರೋಮ್ ಬ್ರೌಸರ್‍ನಲ್ಲಿ ವೆಬ್ ಪೇಜ್ ಟ್ರ್ಯಾಕ್ ಮಾಡಲು ಅನುಮತಿ ನೀಡದೇ ಇದ್ದರೆ ಈ ರೀತಿಯ ಜಾಹೀರಾತುಗಳು ಕಾಣಿಸುವುದಿಲ್ಲ)
5 ಒಂದು ವೇಳೆ ನೀವು ವಾಟ್ಸಪ್ ಆಯ್ಕೆಗೆ ಒಪ್ಪಿಗೆ ನೀಡಿದರೆ ನಿಮ್ಮ ಫೇಸ್‍ಬುಕ್‍ನಲ್ಲೂ ವಾಟ್ಸಪ್ ಅಕೌಂಟ್ ಶೇರ್ ಮಾಡಲು ಅನುಮತಿ ನೀಡಿದಂತಾಗುತ್ತದೆ. ಹೀಗಾಗಿ ನಿಮ್ಮ ಎಫ್‍ಬಿ ಖಾತೆಯಲ್ಲೂ ವಾಟ್ಸಪ್ ಅಕೌಂಟ್ ಇರಲಿದೆ. ಅಷ್ಟೇ ಅಲ್ಲದೇ ನೀವಿರುವ ಜಾಗದ ಮಾಹಿತಿಯೂ ಶೇರ್ ಆಗಲಿದೆ.
ವಾಟ್ಸಪ್ ಹೇಳುತ್ತಿರೋದೇನು?: ಈ ಎರಡೂ ಉತ್ಪನ್ನಗಳ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಶೇರ್ ಮೈ ವಾಟ್ಸಪ್ ಅಕೌಂಟ್ ಇನ್ಫಾರ್ಮೆಶನ್ ವಿತ್ ಫೇಸ್‍ಬುಕ್… ತಂದಿದ್ದೇವೆ. ಯಾರು ಇದಕ್ಕೆ ಒಪ್ಪಿಗೆ ನೀಡುವುದಿಲ್ಲವೋ ಅವರ ನಂಬರ್ ಗಳನ್ನು ಶೇರ್ ಮಾಡುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ.
The post ವಾಟ್ಸಪ್ ನಂಬರ್ ಫೇಸ್‍ಬುಕ್‍ನಲ್ಲಿ ಶೇರ್ ಆದ್ರೆ ಏನಾಗುತ್ತದೆ? ಎಫ್‍ಬಿಗೆ ಲಾಭ ಹೇಗೆ? appeared first on Kannada Public tv.