ಬೆಂಗಳೂರು: ಪುತ್ರಶೋಕದಲ್ಲಿದ್ರೂ ಸಿಎಂ ಸಿದ್ದರಾಮಯ್ಯ ಬೆಂಗಳೂರು ವಿಚಾರದಲ್ಲಿ ದಿಟ್ಟ ನಿರ್ಧಾರ ಪ್ರಕಟಿಸಿದ್ದಾರೆ. ಭಾರೀ ಮಳೆಗೆ ನಲುಗಿದ್ದ ಗಾರ್ಡನ್ ಸಿಟಿಯಲ್ಲಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಲು ಮೊದಲು ರಾಜಕಾಲುವೆ ಒತ್ತುವರಿಗೆ ತೆರವುಗೊಳಿಸಲು ಅಧಿಕಾರಿಗಳಿಗೆ ಸಿಎಂ ಖಡಕ್ ಆಗಿ ಆದೇಶಿಸಿದ್ದಾರೆ. ಇದರ ಜೊತೆ ಮಳೆಯಿಂದ ಆಗಿರುವ ಹಾನಿಗೆ ತುರ್ತು ಕಾಮಗಾರಿಗಳಿಗೆ ಸಿಎಂ 140 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಬಿಬಿಎಂಪಿಗೆ ಘೊಷಿಸಿದ್ದಾರೆ.
ಪುತ್ರಶೋಕದ ನಡುವೆಯೂ ಇಂದು ಬಿಬಿಎಂಪಿ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಿಎಂ, ಮುಲಾಜಿಲ್ಲದೇ ಒತ್ತುವರಿ ಆದ ರಾಜಕಾಲುವೆ ಮಳೆ ಕಾಲುವೆಗಳನ್ನ ತೆರವುಗೊಳಿಸಿ ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಹಿರಿಯ ವಕೀಲರನ್ನು ನೇಮಿಸಿ: 1101 ಇಂಥಹ ಒತ್ತುವರಿ ಕಾಲುವೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ನಾಳೆಯಿಂದಲೇ ತೆರವು ಕಾರ್ಯಚರಣೆ ಆರಂಭಿಸಿ ಎಂದು ಸಿಎಂ ಆದೇಶಿಸಿದರು. ಈ ಸಂದರ್ಭದಲ್ಲಿ ರಾಜಕಾಲುವೆ ಒತ್ತುವರಿಗೆ ನ್ಯಾಯಾಯಲಯದಿಂದ ತಡೆಯಾಜ್ಞೆ ಇರುವ ವಿಚಾರವೂ ಚರ್ಚೆ ಆಯಿತು. ಈ ವೇಳೆ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಲು ಹಿರಿಯ ವಕೀಲರನ್ನು ನೇಮಿಸಿಕೊಳ್ಳಬೇಕು. ಒತ್ತುವರಿದಾರರು ಕೋರ್ಟ್ ಗೆ ಹೋಗುವ ಮೊದಲು ಕೇವಿಯಟ್ ಹಾಕಿಕೊಳ್ಳಿ ಎಂದು ಸಿಎಂ ಆದೇಶಿಸಿದರು.
ತುರ್ತಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು, ಇದಕ್ಕಾಗಿ ಪೈಥಾನ್ ತಂತ್ರಜ್ಞಾನ ಬಳಸಬೇಕು. ಕೆರೆ ಅಂಗಳದಲ್ಲಿ ಡಿ.ಇ.ಒ ಅನುಗ್ರಹ, ಅಕ್ಷಯ ಲೇಔಟ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಅಕ್ರಮವಾಗಿದ್ದು, ಮೂರು ದಿನದೊಳಗೆ ತಪ್ಪಿತಸ್ಥ ಅಧಿಕಾರಿಗಳ ವರದಿಯನ್ನು ನೀಡಬೇಕೆಂದು ಸಿಎಂ ಖಡಕ್ ಸೂಚನೆ ನೀಡಿದರು.
ಶನಿವಾರ ಸಭೆ: ಬಿಬಿಎಂಪಿ ಜಲಮಂಡಳಿ, ಅರಣ್ಯ ಇಲಾಖೆ ಬಿಡಿಎ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲು ಪ್ರತಿ ಶನಿವಾರ ಸಭೆ ನಡೆಸುವಂತೆ ಸಿಎಂ ಸೂಚಿಸಿದರು. ಬೆಂಗಳೂರು ಮಳೆ ವಿಚಾರದಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ವಿಚಾರದಲ್ಲಿ ಅಧಿಕಾರಿಗಳಿಗೆ ಸ್ವಲ್ಪ ಬುದ್ಧಿ ಹೇಳಿದ ಸಿಎಂ ಮಳೆ ಹೆಚ್ಚು ಬಂದರೆ ಮುಂದೆ ಏನಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಖಡಕ್ ಎಚ್ಚರಿಕೆಯನ್ನು ನೀಡಿದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಡಿಸಿಎಫ್ ದೀಪಿಕಾ ಬಾಜ್‍ಪೇಯಿ ಮಧ್ಯೆ ನಡೆದ ವಾಗ್ವಾದದ ಬಗ್ಗೆಯೂ ಸಿಎಂ ಸಭೆಯಲ್ಲಿ ಚರ್ಚೆ ನಡೆಸಿದರು. ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದರೆ ಅಧಿಕಾರಿಯಾಗಿ ನೀವು ಸ್ಪಂದಿಸಬೇಕೇ ಹೊರತು ಶಾಸಕರೊಂದಿಗೆ ವಾಗ್ವಾದಕ್ಕೆ ಇಳಿಯುವುದಲ್ಲ ಎಂದು ದೀಪಿಕಾ ಅವರಿಗೆ ಸೂಚನೆ ನೀಡಿದ ಸಿಎಂ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಅಲ್ಲಿಯ ಸಮಸ್ಯೆ ಬಗೆಹರಿಸಲು ಸೂಚಿದರು.
ಸತೀಶ್ ರೆಡ್ಡಿ ಹಾಗೂ ದೀಪಿಕಾ ನಡುವಿನ ವಾಗ್ವಾದವನ್ನ ಸಿಎಂ ಬಗೆ ಹರಿಸೋದ್ರೊಂದಿಗೆ ಅಧಿಕಾರಿಗಳಿಗೂ ಗೌರವದಿಂದ ನೋಡುವಂತೆ ಸಿಎಂ ಶಾಸಕರಿಗೆ ಸೂಚಿಸಿದರು. ಈ ವೇಳೆ ಮಾತನಾಡಿದ ಸತೀಶ್ ರೆಡ್ಡಿ ಈ ಪ್ರಕರಣವನ್ನ ದೊಡ್ಡದು ಮಾಡಲಿಕ್ಕೆ ಹೋಗುವುದಿಲ್ಲ ಹಕ್ಕು ಚ್ಯುತಿ ಮಂಡಿಸುವುದಿಲ್ಲ ಎಂದರು.
ಸಭೆಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ್, ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್, ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಪೊಲೀಸ್ ಆಯುಕ್ತ ಮೇಘರಿಕ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಭಾಗಿಯಾಗಿದ್ದರು.
The post ಪುತ್ರಶೋಕದಲ್ಲಿದ್ರೂ ಸಭೆ; ಬೆಂಗಳೂರು ಅಭಿವೃದ್ಧಿಗೆ ಸಿಎಂ ಖಡಕ್ ಆದೇಶಗಳು appeared first on Kannada Public tv.