ಧಾರವಾಡ/ಬೆಳಗಾವಿ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಧಾರವಾಡ ಹಾಗೂ ಬೆಳಗಾವಿ ಯೋಧರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.
ಧಾರವಾಡ ಜಿಲ್ಲೆಯ ಸೈದಾಪೂರ ಸ್ವಗ್ರಾಮದಲ್ಲಿ 24 ವರ್ಷದ ಯೋಧ ಹಸನ್‍ಸಾಬ್ ಖುದಾವಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯೋಧ ಸಾವನ್ನಪ್ಪಿ ನಾಲ್ಕು ದಿನಗಳಾಗಿದ್ದರಿಂದ ಪಾರ್ಥಿವ ಶರೀರವನ್ನು ಗೋವಾ ವಿಮಾನ ನಿಲ್ದಾಣದಿಂದ ಬೆಳಗಾವಿ ರಸ್ತೆ ಮೂಲಕ ಸ್ವಗ್ರಾಮ ಸೈದಾಪುರಕ್ಕೆ ಒಯ್ಯಲಾಯಿತು.
ಈ ವೇಳೆ ಅಂತ್ಯಕ್ರಿಯೆಗೆ ಮಳೆ ಅಡ್ಡಿಪಡಿಸಿತು. ಮಳೆ ನಿಂತ ಬಳಿಕ ನಡೆದ ವೀರಯೋಧನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. ಈ ವೇಳೆ ಮೃತ ಯೋಧನ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು. ಈ ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.
ಇತ್ತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾವಿಯ 48 ವರ್ಷದ ಸುಭೇದಾರ ಬಸಪ್ಪ ಪಾಟೀಲ್ ಅವರ ಅಂತ್ಯಕ್ರಿಯೆಯೂ ಇಂದೇ ನೆರವೇರಿಸಲಾಯಿತು. ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಇಡೀ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿತು.
ಒಂದೆಡೆ ತಮ್ಮ ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಗಂಡನನ್ನ ಕಳೆದುಕೊಂಡ ಪತ್ನಿ ಶಂಕುತಲಾ ಹಾಗೂ ಮಕ್ಕಳಾದ ಕೀರ್ತಿ ಮತ್ತು ಪ್ರಕಾಶ ಅವರ ಆಕ್ರಂದನ ಎಂಥವರಿಗೂ ಕಣ್ಣಲ್ಲಿ ನೀರು ಬರುವಂತಿತ್ತು. ಇನ್ನು ಸಹೋದರ ಸುರೇಶ, ಮೃತ ಯೋಧ ಬಸಪ್ಪ ಪಾಟೀಲ ಗಸ್ತಿಗೆ ಹೊರಡುವ ಮುನ್ನ ತನ್ನ ಮನಗೆ ಫೋನ್ ಮಾಡಿ ಗಸ್ತಿಗೆ ಹೋಗಬೇಕು ಅಂತಾ ಮಾತನಾಡಿದ್ದರು. ಅದಾದ ನಂತ್ರ ಮರಳಿ ಬಂದಿದ್ದು ಬಸಪ್ಪ ಸಾವನ್ನಪ್ಪಿರುವ ಸುದ್ದಿ ಅಂತಾ ಕಣ್ಣೀರು ಹಾಕಿದ್ರು.
ಇದಲ್ಲದೇ ಜಿಲ್ಲಾಧಿಕಾರಿ ಎನ್ ಜಯರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ನಂತರ ಗ್ರಾಮದಲ್ಲಿ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ನಂತರ ಗ್ರಾಮದ ಹೊರವಲಯದಲ್ಲಿರುವ ರುದ್ರಭೂಮಿಯಲ್ಲಿ ವಿಧಿವಿಧಾನದ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು.
The post ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧರಿಗೆ ಅಂತಿಮ ನಮನ appeared first on Kannada Public tv.