– ರಾಜ್ಯವನ್ನೇ ರೊಚ್ಚಿಗೇಳಿಸಿದೆ ಕಳಸಾ ಕಿಚ್ಚು
– ಗದಗ, ಬೆಳಗಾವಿ, ಧಾರವಾಡ ಉದ್ರಿಕ್ತ
ಬೆಂಗಳೂರು: ಬಂದ್ ಬಂದ್ ಬಂದ್… ಮಹದಾಯಿ ನ್ಯಾಯಾಧಿಕರಣ ಮಾಡಿರುವ ಮಹಾ ಮೋಸಕ್ಕೆ ಇಡೀ ಉತ್ತರಕರ್ನಾಟಕ ಹೊತ್ತಿ ಉರಿಯುತ್ತಿದೆ. ನಾಡು, ನುಡಿ, ಜಲದ ವಿಷ್ಯದಲ್ಲಿ ಸಮರಕ್ಕೂ ಸಿದ್ಧವಾಗಿರುವ ಕರ್ನಾಟಕ ಇವತ್ತು ಕೊತ ಕೊತ ಕುದಿಯುತ್ತಿದೆ. ನಮ್ಮ ರಾಜ್ಯದಲ್ಲೇ ಹುಟ್ಟಿ ನಮ್ಮಲ್ಲೇ ಹರಿದು ಗೋವಾ ಮೂಲಕ ಸಮುದ್ರ ಸೇರುವ ನದಿ ನೀರನ್ನು ಕೇಳುವುದೇ ತಪ್ಪಾ ಎನ್ನುವ ಆಕ್ರೋಶ ಹಿಂಸಾರೂಪ ಪಡೆದಿದೆ. ಮಧ್ಯಂತರ ಆದೇಶವನ್ನು ವಿರೋಧಿಸಿ ಇವತ್ತು ಹೋರಾಟಗಾರರು ಕರೆ ಕೊಟ್ಟ ಕರ್ನಾಟಕ ಬಂದ್ ಜ್ವಾಲಾಮುಖಿಯಂತೆ ಉಕ್ಕುತ್ತಿದೆ.
ವಿಶೇಷವಾಗಿ ಉತ್ತರಕರ್ನಾಟಕದ ಹುಬ್ಬಳ್ಳಿ ಧಾರವಾಡ, ಗದಗ, ಬೆಳಗಾವಿಯಲ್ಲಂತೂ ಜನ ರೊಚ್ಚಿಗೆದ್ದು ಕೇಂದ್ರ ಸರ್ಕಾರದ ಕಚೇರಿಗಳನ್ನು ಧ್ವಂಸ ಮಾಡಿದ್ದಾರೆ. ಮುಂಜಾನೆಯಿಂದ ಬೀದಿಗಿಳಿದ ಹೋರಾಟಗಾರರು ಕೆಲವೆಡೆ ಜನರ ಮನವೊಲಿಸಿದರು. ಬಳಿಕ ಸ್ವಯಂಪ್ರೇರಿತವಾಗಿ ಶಾಲಾ ಕಾಲೇಜು, ಅಂಗಡಿ ಮುಂಗಟ್ಟು, ಚಿತ್ರಮಂದಿರ, ಮಾರ್ಕೆಟ್ ಹೀಗೆ ಪ್ರತಿಯೊಂದೂ ಬಂದ್ ಆಗತೊಡಗಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೇ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರೂ ಎದೆಗುಂದದ ಹೋರಾಟಗಾರರು ಖಾಕಿ ವಿರುದ್ಧವೇ ತಿರುಗಿಬಿದ್ದರು.
ಧಾರವಾಡದಲ್ಲಿ ಇಬ್ಬರು ಪ್ರತಿಭಟನಾಕಾರರು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದರು. ಹೈದ್ರಾಬಾದ್ ಕರ್ನಾಟಕ, ಮೈಸೂರು ಭಾಗ, ಮುಂಬೈ ಕರ್ನಾಟಕದಲ್ಲೂ ಕಳಸಾ ಕಹಳೆ ಮೊಳಗುತ್ತಿದೆ. ಆದರೆ ಕರಾವಳಿ ಭಾಗದ ಉಡುಪಿಯಲ್ಲೂ ಪ್ರತಿಭಟನೆ ನಡೆದರೆ ದಕ್ಷಿಣಕನ್ನಡದಲ್ಲಿ ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯ ವಾತಾವರಣವಿದೆ.
ಯಾವ ಜಿಲ್ಲೆಯಲ್ಲಿ ಹೇಗಿತ್ತು ಆಕ್ರೋಶ?
ಧಾರವಾಡ ಮಹದಾಯಿ ಹೋರಾಟಕ್ಕೆ ಅಕ್ಷರಶಃ ಅಗ್ನಿಕುಂಡವಾಗಿತ್ತು. ನವಲಗುಂದದಲ್ಲಿ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ ಉದ್ರಿಕ್ತರು ಪುರಭವನ, ರೋಜಗಾರ್ ಆಫೀಸ್, ಕಂದಾಯ ಇಲಾಖೆ ಹಾಗೂ ಬಿಎಸ್‍ಎನ್‍ಎಲ್ ಕಚೇರಿಗೆ ಬೆಂಕಿ ಇಟ್ಟರು. ತಹಸೀಲ್ದಾರ್ ಕಚೇರಿ, ನೀರಾವರಿ ಕಚೇರಿಗೂ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿ ದಾಖಲೆಗಳಿಗೆ ಬೆಂಕಿ ಕೊಟ್ಟರು.
ಇದಾದ ಬಳಿಕ ಕೋರ್ಟ್ ಕಟ್ಟಡಕ್ಕೂ ಕಲ್ಲು ಹೊಡೆದು, ಪಾಲಿಕೆಗೂ ನುಗ್ಗಿದ್ರು. ಪರಿಸ್ಥಿತಿ ಹತೋಟಿಗೆ ಪೊಲೀಸರು ಲಾಠಿಚಾರ್ಜ್ ಮಾಡಿದರು. ಆದ್ರೂ ರಕ್ತ ಸುರಿಯುತ್ತಿದ್ದರೂ ರೊಚ್ಚಿಗೆದ್ದು ಧಾರವಾಡ ಎಸ್ಪಿ ಧರ್ಮೇಂದ್ರ ಮೀನಾರನ್ನು ಬಡಿಗೆ ಹಿಡಿದು ಅಟ್ಟಾಡಿಸಿದ್ರು. ಕೊನೆಗೆ ರೈತರಿಗೆ ಕೈ ಮುಗಿದ ಎಸ್ಪಿ ಕಾಲ್ಕಿತ್ತರು. ಈ ಮಧ್ಯೆ, ರೈತರು ಅಂತ ಹೇಳಿಕೊಂಡು ಕಾರ್‍ನಲ್ಲಿ ತಲ್ವಾರ್, ಪಿಸ್ತೂಲ್ ತಂದಿದ್ದ ನಾಲ್ವರನ್ನು ಅರೆಸ್ಟ್ ಮಾಡಲಾಯ್ತು. ಸದ್ಯಕ್ಕೀಗ 144 ಸೆಕ್ಷನ್ ಹಾಕಲಾಗಿದೆ.
ಗದಗ: ಹೋರಾಟ ರಕ್ತಗತವಾಗಿ ಬಂದಿರುವ ನರಗುಂದ ಮತ್ತು ಗಜೇಂದ್ರಗಢದಲ್ಲಿ ಬಂದ್‍ಗೆ ಕರೆ ಕೊಟ್ಟಿದ್ರೂ ಓಪನ್ ಆಗಿದ್ದ ಪೋಸ್ಟ್ ಆಫೀಸ್, ಲಾಡ್ಜ್‍ಗಳ ಗ್ಲಾಸ್‍ಗಳು ಪುಡಿ ಪುಡಿ ಆದ್ವು. ಇಲ್ಲೂ ಕೂಡ ಪೊಲೀಸರು ಲಾಠಿಚಾರ್ಜ್ ಮಾಡಿ ನಿಷೇಧಾಜ್ಞೆ ಜಾರಿ ಮಾಡಿದ್ರು. ಪ್ರಮುಖ ರಸ್ತೆಗಳಲ್ಲಿ ಟೈರ್‍ಗೆ ಬೆಂಕಿ ಹಚ್ಚಿ, ಪಂಜಿನ ಮೆರವಣಿಗೆ ಮಾಡಲಾಯ್ತು. ರೈತರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ಹೋರಾಟಗಾರರಾದ ಚನ್ನಬಸವ ಚರಂತಿಮಠ, ನಂದೀಶ್ ಮಠದ ಅವರನ್ನ ಕಿಮ್ಸ್ ಗೆ ಅಡ್ಮಿಟ್ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಕೊಡಲಾಗಿದ್ದು, ಬಾರ್‍ಗಳನ್ನ ಮುಚ್ಚಿಸಲಾಗಿದೆ.
ಬೆಳಗಾವಿ: ಇದೇ ವೇಳೆ, ಮಹದಾಯಿ ನದಿ ಹುಟ್ಟೋ ಜಿಲ್ಲೆಯಾಗಿರೋ ಬೆಳಗಾವಿ ಧಗ ಧಗಿಸಿ ಹೋಯ್ತು. ಖಾನಾಪುರ, ಸವದತ್ತಿ, ಬೈಲಹೊಂಗಲ ಹಾಗೂ ರಾಮದುರ್ಗ ತಾಲೂಕುಗಳು ಸ್ತಬ್ಧವಾಗಿದ್ದವು. ಸಂಸದ ಸುರೇಶ್ ಅಂಗಡಿ ಮನೆಗೆ ಮುತ್ತಿಗೆ ಹಾಕೋ ಪ್ರಯತ್ನವೂ ನಡೆಯಿತು. ಗೋವಾ-ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಹೆದ್ದಾರಿಯಲ್ಲೇ ಲಾರಿ ಕೆಳಗೆ ಮಲಗಿ ಪ್ರತಿಭಟನೆ ಮಾಡಿದ್ರು. ಮುನವಳ್ಳಿಯಲ್ಲಿ ಕತ್ತೆಗಳ ಮೂಲಕ ಸಂಸದರ ಅಣಕು ಪ್ರದರ್ಶನ ಮಾಡಲಾಯ್ತು. ಕೊನೆಗೆ ಬೆಳಗಾವಿಯ ಗೋವಾ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಯ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗೋವಾ ಸರ್ಕಾರ ಯಾವುದೇ ಬಸ್‍ಗಳನ್ನ ಬೆಳಗಾವಿಗೆ ಬಿಟ್ಟಿರಲಿಲ್ಲ.
ಹುಬ್ಬಳ್ಳಿ: ಇಲ್ಲೂ ಹೋರಾಟ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮಕ್ಕಳಾದಿಯಾಗಿ ಮಹಿಳೆಯರು, ಪುರುಷರು ಕಾಲ್ನಡಿಗೆ ಮಾಡಿ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಕನ್ನಡ ಪರ ಸಂಘಟನೆಗಳು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ, ಬೈಕ್‍ಮೆರವಣಿಗೆ, ಅರೆಬೆತ್ತಲೆ ಮೆರವಣಿಗೆ, ಬೊಬ್ಬೆ ಚಳವಳಿ, ರಾಜಕಾರಣಿಗಳ ಪ್ರತಿಕೃತಿ ದಹಿಸಿದರು. ಸ್ಕೂಲ್ ಕಾಲೇಜ್, ಮಾರ್ಕೆಟ್, ಥಿಯೇಟರ್, ಪೆಟ್ರೋಲ್ ಬಂಕ್ಸ್, ಬ್ಯಾಂಕ್‍ಗಳು ಬಂದ್ ಆಗಿತ್ತು.
ಬೆಂಗಳೂರು: ಈ ಮಹದಾಯಿ ಹೋರಾಟ ಕೇವಲ ಉತ್ತರಕರ್ನಾಟಕದ್ದಲ್ಲ. ಇಡೀ ರಾಜ್ಯದ್ದು. ಒಗ್ಗಟ್ಟಿನಲ್ಲಿ ಬಲವಿದೆ. ಆ ಬಲಕ್ಕೆ ಜಯವಿದೆ ಅನ್ನೋದನ್ನ ಅರಿತ ಇಡೀ ರಾಜ್ಯವೇ ಇವತ್ತು ಬೀದಿಗಿಳಿದಿತ್ತು. ಈ ಮನೋಭಾವದಿಂದಲೇ ಇತ್ತ ಬೆಂಗಳೂರಿನಲ್ಲೂ ರೈತ ಸಂಘ, ಕರವೇ, ದಲಿತ ಸಂಘಟನೆಗಳು ಮತ್ತು ಜೆಡಿಯು ಪಕ್ಷ ಪ್ರತಿಭಟನೆ ನಡೆಸಿದ್ವು. ಬಳಿಕ ಮೆರವಣಿಗೆ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕುವ ಯತ್ನ ನಡೆದಾಗ ಹಲವರನ್ನ ಅರೆಸ್ಟ್ ಮಾಡಲಾಯ್ತು. ಈ ಮಧ್ಯೆ, ನವಲಗುಂದದಲ್ಲಿ ಲಾಠಿಜಾರ್ಜ್ ಖಂಡಿಸಿ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ನವಲಗುಂದದ ಜೆಡಿಎಸ್ ಶಾಸಕ ಕೋನರೆಡ್ಡಿ ಧರಣಿ ನಡೆಸಿದ್ರು.
ಮೊಟ್ಟೆಯಿಂದ ಛೀಮಾರಿ: ಆನೇಕಲ್‍ನಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಸೀಮೆಎಣ್ಣೆ ಸುರಿದುಕೊಂಡು ಕಾರ್ಯಕರ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ. ಚಿಕ್ಕಬಳ್ಳಾಪುರ ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಮೊಟ್ಟೆಯಿಂದ ಹೊಡೆದು ಛೀಮಾರಿ ಹಾಕಿದ್ರು. ಕೋಲಾರದಲ್ಲಿ ಮೊಟ್ಟೆಯೊಡೆದು ಟೊಮ್ಯಾಟೋ ಸುರಿದ್ರು. ನೆಲಮಂಗಲದಲ್ಲಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಹೆಂಗಸರಂತೆ ಸೀರೆ, ಬಳೆ, ಹೂ ತೊಡಿಸಿ ಜನಪ್ರತಿನಿಧಿಗಳ ಪಿಂಡ ಕಾರ್ಯನಡೆಸಿದ್ರು.
ಮೈಸೂರು ಕರ್ನಾಟಕ: ಮೈಸೂರಿನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ರು. ಮಂಡ್ಯದಲ್ಲಿ ಶಾಸಕ ಒಪುಟ್ಟಣ್ಣಯ್ಯ ನ್ಯಾಯಾಧೀಶರಾದವರಿಗೆ ಸಾಮಾಜಿಕ ಜ್ಞಾನ, ಲೀಗಲ್ ಸೆನ್ಸ್ ಇರಬೇಕು. ಮಹದಾಯಿ ತೀರ್ಪು ಅವೈಜ್ಞಾನಿಕ ಅಂದ್ರು. ರಾಮನಗರದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಕನ್ನಡ ಪರ ಸಂಘಟನೆಗಳು ಆಗಸ್ಟ್ 4ರಂದು ಮಂಡ್ಯದಿಂದ ಬಂಡೂರಿಗೆ ಪ್ರತಿಭಟನಾ ರ್ಯಾಲಿ ನಡೆಸುವ ಎಚ್ಚರಿಕೆ ನೀಡಿದ್ವು. ಹಾಸನದ ಎನ್‍ಆರ್ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲೂ ಹೋರಾಟ ತೀವ್ರ ಸ್ವರೂಪ ಪಡೆದು ಅಂಗಡಿ ಮುಂಗಟ್ಟು ಮುಚ್ಚಿದ್ದವು.
ಬಾಗಲಕೋಟೆ ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತರತು ಪ್ರತಿಭಟನೆ ನಡೆಸಿದ್ರು. ಈ ವೇಳೆ, ಶಾಸಕ ಜೆ.ಟಿ.ಪಾಟೀಲ್ ಕಾರ್‍ಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿದ್ರು. ಬೀದರ್‍ನಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಎಲ್ಲಾ ಸಂಸದರು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಚಿತ್ರದುರ್ಗದಲ್ಲಿ ಶಾಸಕರು, ಸಂಸದರು ಮೌನಕ್ಕೆ ಕಿಡಿಕಾರಿದ್ರು. ದಾವಣಗೆರೆಯಲ್ಲಿ ರಾಜ್ಯ ರೈತ ಸಂಘ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ರಸ್ತೆ ತಡೆ ನಡೆಸಿದ್ರೆ, ಕನ್ನಡಪರ ಸಂಘಟನೆಗಳು ಮಾನವ ಸರಪಳಿ ಮಾಡಿದ್ರು. ತುಮಕೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದ್ರು.
ಇನ್ನೂ ರಾಜ್ಯದ ಎಲ್ಲಾ ಕಡೆ ಮಹದಾಯಿ ಹೋರಾಟ ನಡೆಯುತ್ತಿದ್ದರೆ ರಾಯಚೂರು, ಮಂಗಳೂರು, ಕಾರವಾರದಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ, ಜನಜೀವನ ಎಂದಿನಂತೆ ಇದ್ದು ವ್ಯಾಪಾರ ವಹಿವಾಟುಗಳು ಸುಗಮವಾಗಿ ನಡೆದ್ವು. ಬಸ್ ಸಂಚಾರದಲ್ಲೂ ಕೂಡ ಯಾವುದೇ ವ್ಯತ್ಯಾಸವಾಗಲಿಲ್ಲ.
ಪ್ರತಿಭಟನೆಯ ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕಳಸಾಬಂಡೂರಿಗಾಗಿ ಕರ್ನಾಟಕ ಬಂದ್
The post ಮಹಾ ಕಾಳ್ಗಿಚ್ಚು; ಗುರುವಾರ ಎಲ್ಲೆಲ್ಲಿ ಏನಾಯ್ತು? ಕಂಪ್ಲೀಟ್ ರಿಪೋರ್ಟ್ appeared first on Kannada Public tv.