ಬೆಂಗಳೂರು: ಅಧಿಕಾರಿಗಳ ಆತ್ಮಹತ್ಯೆಗೆ ವಿಪಕ್ಷಗಳೇ ಕಾರಣ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ್, ನೀವು ಇವತ್ತು ಅಧಿಕಾರಿಗಳ ಮೇಲೆ ಒತ್ತಡ ಇದೆ ಅಂತೀರಿ. ನೀವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ರಿ. ಇವತ್ತು ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವತ್ತು ನೀವು ಹಾಕಿದ ಒತ್ತಡ ಕಾರಣ. ಆತ್ಮಹತ್ಯೆಗೆ ಕಾಂಗ್ರೆಸ್ ಕಾರಣವಲ್ಲ ಅಂತ ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.
2018ರ ಚುನಾವಣೆ ಸಂದರ್ಭದಲ್ಲಿ ಜನ ನಮ್ಮ ಕಡೆ ಬೆರಳು ಮಾಡಿ ತೋರಿಸಬಾರದು. ಉಳಿದ ಎರಡು ವರ್ಷದಲ್ಲಿ ಪ್ರತಿಪಕ್ಷದವರ ಟೀಕೆ ಎದುರಿಸಲು ನಾವು ಸನ್ನದ್ಧರಾಗಿರಬೇಕು. ಸಣ್ಣಪುಟ್ಟ ವಿಷಯಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಪ್ರತಿಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಆದರೆ ಕರ್ನಾಟಕದ ಜನರ ಮುಂದೆ ನಿಮ್ಮ ಬೇಳೆ ಬೇಯಲ್ಲ. ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿಯಿಂದಷ್ಟೇ ಅಲ್ಲ, ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದ್ರು.
ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಆದರೆ ಅದನ್ನು ಬಹಿರಂಗವಾಗಿ ಮಾಧ್ಯಮಗಳ ಎದುರು ಹೇಳಿಕೆ ನೀಡಬಾರದು. ಒಂದು ವೇಳೆ ಬಹಿರಂಗ ಹೇಳಿಕೆ ನೀಡಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಅಂತ ಎಚ್ಚರಿಕೆ ನೀಡಿದ್ರು.
The post ಅಧಿಕಾರಿಗಳ ಆತ್ಮಹತ್ಯೆಗೆ ವಿಪಕ್ಷಗಳೇ ಕಾರಣ: ಪರಮೇಶ್ವರ್ appeared first on Kannada Public tv.