ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಸಿಬಿಐನಿಂದ ನಡೆಸುವಂತೆ ಕೇಂದ್ರ ಸಚಿವ ಅರುಣ್ ಜೆಟ್ಲಿಯವರನ್ನ ಮನವಿ ಮಾಡಿದ್ದೇವೆ ಅಂತ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣಪತಿ ಆತ್ಮಹತ್ಯೆ ದುರದೃಷ್ಟಕರ, ರಾಜ್ಯದಲ್ಲಿ ಇಷ್ಟು ದಿನ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದರು, ಈಗ ದಕ್ಷ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಅಷ್ಟರ ಮಟ್ಟಿಗೆ ಆಡಳಿತ ಕೆಟ್ಟು ಹೋಗಿದೆ ಅಂತ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಹರಿಹಾಯ್ದ ಯಡಿಯೂರಪ್ಪ ಈ ಸರ್ಕಾರ ಜನರ ಪಾಲಿಗೆ ಸತ್ತಂತಿದೆ, ಅದನ್ನು ಸರಿಪಡಿಸುವ ಗೋಜಿಗೆ ಸಿಎಂ ಹೋಗ್ತಿಲ್ಲ, ಇತ್ತ ಗಣಪತಿ ಜಾರ್ಜ್ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಭೇಟಿ ಮಾಡಿ ತನಿಖೆಗೆ ಮನವಿ ಮಾಡಿದ್ದೇವೆ. ಆದರೆ ರಾಜ್ಯ ಸರ್ಕಾರ ಪ್ರಕರಣವನ್ನ ಸಿಐಡಿಗೆವಹಿಸಿದೆ ಇಲ್ಲಿ ಸತ್ಯ ಹೊರಬರೋದು ಅನುಮಾನ, ಹೀಗಾಗಿ ಪ್ರಕರಣವನ್ನ ಸಿಬಿಐಗೆ ವಹಿಸಬೇಕು, ಹಾಗೇ ನಾಳಿನ ಅಧಿವೇಶನದ ಉಭಯ ಕಲಾಪಗಳಲ್ಲಿ ಗಣಪತಿ ಹಾಗೂ ಅನುಪಮಾಶಣೈ ಪ್ರಕರಣದ ವಿಚಾರವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡೋದಾಗಿ ಹೇಳಿದರು.
ಇದೇ ವೇಳೆ ರಾಜ್ಯ ಕೋರ್‍ಕಮಿಟಿ ರಚನೆ ವಿಚಾರದಲ್ಲಿ ಮಾತನಾಡಿದ ಅವರು,ಕೋರ್ ಕಮಿಟಿ ರಚನೆ ವಿಚಾರದಲ್ಲಿ ಕೇಂದ್ರದ ವರಿಷ್ಠರ ತೀರ್ಮಾನವೇ ಅಂತಿಮ, ರಾಜ್ಯದಲ್ಲಿ ಶೋಭಾ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡ್ತಿದ್ದಾರೆ, ಕಮಿಟಿ ಪುನಾರಚನೆಯಿಂಧ ಪಕ್ಷ ಕಟ್ಟಲು ಯಾವುದೇ ಸಮಸ್ಯೆ ಇಲ್ಲ ಅಂತ ಅವರು ತಿಳಿಸಿದರು.
ಇದಲ್ಲದೇ ಕೋರ್ ಕಮಿಟಿಯಲ್ಲಿ ಎಷ್ಟು ಜನ ಇರಬೇಕು ಎಂಬುದನ್ನು ಕೇಂದ್ರದ ನಾಯಕರೇ ನಿರ್ಧಾರ ಮಾಡ್ತಾರೆ, ಅದರಂತೆ ನಾವು ಪಕ್ಷದ ಕೆಲಸ ಮಾಡ್ತೇವೆ. ಇದ್ರಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ, ಈ ಬಗ್ಗೆ ಅನಗತ್ಯ ಚರ್ಚೆ ಬೇಡ ಅಂಥ ಯಡಿಯೂರಪ್ಪ ಹೇಳಿದರು.
The post ಡಿವೈಎಸ್‍ಪಿ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವಂತೆ ಜೇಟ್ಲಿಗೆ ಮನವಿ: ಬಿಎಸ್‍ವೈ appeared first on Kannada Public tv.