ಬೆಂಗಳೂರು: ಬ್ಲಾಕ್ ಆಂಡ್ ವೈಟ್ ದಂಧೆಯಲ್ಲಿ ಶಾಮೀಲಾದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಸಿಬ್ಬಂದಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಎಸ್‍ಬಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ (56) ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ. ಇಂದು ಬೆಳಗ್ಗೆ ವಾಕಿಂಗ್ ಹೋಗಿ ಬಂದ ಬಳಿಕ ಮನೆಯ ಕೊಠಡಿಗೆ ತೆರಳಿ ರವಿರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನೇಣಿಗೆ ಶರಣಾಗಿದ್ದು ಯಾಕೆ?
ಕ್ಯಾಶ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ ಮೇಲೆ ಬ್ಲಾಕ್ ಅಂಡ್ ವೈಟ್ ದಂಧೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ಆರೋಪ ಕೇಳಿ ಬಂದಿತ್ತು.ಈ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಸಿಬಿಐ ಅಧಿಕಾರಿಗಳು ರವಿರಾಜ್ ವಿಚಾರಣೆ ನಡೆಸಿದ್ದರು. ರಾತ್ರಿ ಹತ್ತು ಗಂಟೆಯವರೆಗೂ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ವಿಚಾರಣೆ ವೇಳೆ ರವಿರಾಜ್ ಮೇಲಿದ್ದ ಆರೋಪ ಸಾಬೀತಾಗಿತ್ತು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ಬಂಧನ ಮಾಡುತ್ತದೆ. ಅಷ್ಟೇ ಅಲ್ಲದೇ ಕೆಲಸ ಹೋಗುತ್ತದೆ ಎಂದು ವಿಚಲಿತನಾಗಿ ರವಿರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.
ರವಿರಾಜ್ ನನ್ನು ಕೆಲಸದಿಂದ ಅಮಾನತು ಮಾಡಲು ಎಸ್‍ಬಿಎಂ ಸಿದ್ಧತೆ ಮಾಡಿಕೊಂಡಿತ್ತು. ಗುರುವಾರ ಅಮಾನತು ನೋಟಿಸ್ ರವಿರಾಜ್ ಕೈಸೇರಬೇಕಿತ್ತು.