ಜೈಪುರ: ರಣಜಿಯಲ್ಲಿ ಗುಜರಾತ್ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಸಮಿತ್ ಗೊಹೇಲ್ ಅಜೇಯ 359 ರನ್ ಬಾರಿಸಿವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸವಾಯ್ ಮಾನ್‍ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಒಡಿಶಾ ಎದುರಿನ ಐದು ದಿನಗಳ ಕ್ವಾರ್ಟರ್ ಫೈನಲ್ ರಣಜಿ ಪಂದ್ಯದಲ್ಲಿ ಸಮಿತ್ ಈ ರನ್ ಹೊಡೆದಿದ್ದಾರೆ. ಈ ಮೂಲಕ ಆರಂಭಿಕ ಆಟಗಾರನೋರ್ವ ಗಳಿಸಿದ ಅತ್ಯಧಿಕ ರನ್ ಎಂಬ ಖ್ಯಾತಿಗೆ ಸುಮಿತ್ ಭಾಜನರಾಗಿದ್ದಾರೆ.
ಈ ಹಿಂದೆ 1899ರಲ್ಲಿ ಇಂಗ್ಲೆಂಡ್ ನ ಸರ್ರೆ ತಂಡದ ಬಾಬಿ ಅಬೆಲ್ 357 ರನ್ ಹೊಡೆದಿದ್ದರು. ಆದರೆ ಇಗ ಈ ದಾಖಲೆಯನ್ನು ಸಮಿತ್ ಗೊಹೇಲ್ ಮುರಿದು ಆಗ್ರ ಸ್ಥಾನಕ್ಕೆ ಏರಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 4 ರನ್‍ಗಳಿಗೆ ಔಟಾಗಿದ್ದ ಸಮಿತ್ ಗೊಹೇಲ್ ಎರಡನೇ ಇನ್ನಿಂಗ್ಸ್ ನಲ್ಲಿ 723 ಎಸೆತಗಳನ್ನು ಎದುರಿಸಿ 359 ರನ್ ಹೊಡೆದಿದ್ದಾರೆ. ಇವರ ಬ್ಯಾಟ್‍ನಿಂದ 45 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಲ್ಪಟ್ಟಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 263 ರನ್‍ಗಳಿಗೆ ಆಲೌಟ್ ಆಗಿದ್ದ ಗುಜರಾತ್ ಎರಡನೇ ಇನ್ನಿಂಗ್ಸ್ ನಲ್ಲಿ 641 ರನ್‍ಗಳ ಭಾರೀ ಮೊತ್ತವನ್ನು ಪೇರಿಸಿತ್ತು. ಈ ಮೊತ್ತದಲ್ಲಿ ಶೇ.56 ರನ್ ಗೊಹೇಲ್ ಹೊಡೆದಿದ್ದರು.
ಮೊದಲನೇ ಇನ್ನಿಂಗ್ಸ್ ನಲ್ಲಿ ಒಡಿಶಾ 199 ರನ್‍ಗಳಿಗೆ ಅಲೌಟ್ ಆಗಿದ್ದರೆ, ಪಂದ್ಯ ಮುಕ್ತಾಯದ ವೇಳೆ ಎರಡನೇ ಇನ್ನಿಂಗ್ಸ್ 1 ವಿಕೆಟ್ ಕಳೆದುಕೊಂಡು 81 ರನ್‍ಗಳಿಸಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಗುಜರಾತ್ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 64 ರನ್‍ಗಳ ಮುನ್ನಡೆ ಸಿಕ್ಕಿದ ಕಾರಣ ಈಗ ಸೆಮಿಫೈನಲ್ ಪ್ರವೇಶಿಸಿದೆ.
ರಣಜಿಯ ‘ರನ್’ ದಾರರು:
ನಿಂಬಾಳ್ಕರ್ ಅಜೇಯ 443, ಸಂಜಯ್ ಮಾಂಜ್ರೆಕರ್ 377, ಎಂ ವಿ ಶ್ರೀಧರ್ 366 ಮತ್ತು ವಿಜಯ್ ಮರ್ಚಂಟ್ ಅಜೇಯ 359 ರನ್ ಬಾರಿಸಿದ್ದಾರೆ. ಇದೀಗ ವಿಜಯ್ ಮಂರ್ಚಂಟ್ ಜೊತೆ ಸಮಿತ್ ಗೊಹೇಲ್ ನಾಲ್ಕನೇಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.