ಬೆಂಗಳೂರು: ಪೂರ್ವ ತಯಾರಿ ಇಲ್ಲದೇ ನೋಟ್ ಬ್ಯಾನ್ ಮಾಡಿರೋದ್ರಿಂದ ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ `ನೋಟ್ ಬವಣೆ’ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವ್ರು, ಆರ್‍ಬಿಐ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಮಾಡಿದ್ರೆ, ಜನಸಾಮಾನ್ಯರಿಗೆ ಈ ಕಷ್ಟ ಎದುರಾಗುತ್ತಿರಲಿಲ್ಲ. ಆದ್ರೆ ತಾವು ಮಾಡಿದ್ದೇ ಸರಿ ಅಂತಾ ಮೋದಿ ಹೇಳೋದು ದುರಾದೃಷ್ಟ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.
ಹೊಸ ನಗದು ಮುದ್ರಣಕ್ಕೆ ಕಾಗದ, ಇಂಕ್ ಇಲ್ಲ. ನಮ್ಮ ವೈಟ್ ಕರೆನ್ಸಿ ಪಡೆಯಲು ಅಧಿಕಾರ ಇಲ್ಲ ಅನ್ನೋದು ಸರೀನಾ ಎಂದು ಪ್ರಶ್ನಿಸಿದ ಅವ್ರು, ಮುಂದಿನ 4 ದಿನದಲ್ಲಿ ನೋಟ್ ಬ್ಯಾನ್ ಎಫೆಕ್ಟ್ ಸರಿ ಹೋಗಲ್ಲ. ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಸೋಮವಾರದ ದಿನ ಊಟ ಬಿಡಲು ಹೇಳಿದ್ರು. ಆಗ ಜನ ಊಟ ಬಿಟ್ರು. ಇದು ದೇಶ ಭಕ್ತಿ. ಬ್ಯಾಂಕ್‍ನಿಂದ ಹಣ ಪಡೆಯಲು ಜೀವ ಪಡೆಯೋದು ದೇಶಭಕ್ತಿ ಅಲ್ಲ ಎಂದು ಕಿಡಿಕಾರಿದ್ರು.
ಡಿಜಿಟಲ್ ಹಾಗೂ ಕ್ಯಾಶ್‍ಲೆಸ್ ಸಿಸ್ಟಂ ಬಗ್ಗೆ ಕಿಡಿಕಾರಿದ ಖರ್ಗೆ, ದೇಶದ 130 ಕೋಟಿ ಜನರಲ್ಲಿ 20 ಕೋಟಿ ಮಕ್ಕಳು ವ್ಯವಹಾರ ಮಾಡಲ್ಲ. 100 ಕೋಟಿ ಮಂದಿ ಮಾತ್ರ ಡಿಜಿಟಲ್ ಹೊಂದಿದ್ದರೂ, ರೈತರು, ನಮ್ಮ ತಾಯಂದಿರಿಗೆ ಕಾರ್ಡ್ ಬಳಕೆ ಗೊತ್ತಿಲ್ಲ. ಪ್ರಪಂಚದ ಎಲ್ಲೂ ಈ ಕ್ಯಾಶ್‍ಲೆಸ್ ಸಿಸ್ಟಂ ಇಲ್ಲ. ಎಲ್ಲಾ ದೇಶಗಳಲ್ಲೂ ಕರೆನ್ಸಿ ಇದೆ. ಈ ಬಗ್ಗೆ ಮೋದಿ ಸಂಸತ್‍ನಲ್ಲಿ ಮಾತನಾಡಿಲ್ಲ, ಹೊರಗೆ ಬಂದು ಅವಕಾಶ ಕೊಡಲಿಲ್ಲ ಎಂದು ಹೇಳ್ತಾರೆ. ವಿರೋಧ ಪಕ್ಷಕ್ಕೆ ಅವಕಾಶ ನೀಡದೇ ಇರೊದು ಕೆಟ್ಟ ವಾತಾವರಣ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಮಂತರ ಮೇಲೆ ಏನ್ ಬೇಕಾದ್ರೂ ಮಾಡಿ ಬಡವರನ್ನು ಕಾಪಾಡಿ. 20 ಲಕ್ಷ ಕೋಟಿ ಕರೆನ್ಸಿಯಲ್ಲಿ, 400 ಕೋಟಿ ನಕಲಿ ಹಣವಿದೆ. ಪ್ರಪಂಚ ಬೆಳೆಯುತ್ತಿದೆ. ನೋಟ್ ಬ್ಯಾನ್‍ನಿಂದ ನಮ್ಮ ದೇಶ ಹಿಂದೆ ಉಳಿಯುತ್ತಿದೆ. 2000 ರೂ. ಮುಖಬೆಲೆಯ ನೋಟು ಸಹ ಭಯೋತ್ಪಾದಕರ ಬಳಿ ಸಿಕ್ತಿದೆ. ಇಡೀ ದೇಶದ ಜನ ಮೋದಿ ವಿರುದ್ಧ ಇದ್ದಾರೆ. ಒಮ್ಮೆ ಸದನದಲ್ಲಿ ಚರ್ಚೆಗೆ ಬಂದ್ರೆ ಅವರ ಬಣ್ಣ ಹೊರಗೆ ಬರಲಿದೆ. ಅಡ್ವಾಣಿ ನಿಲುವನ್ನು ಈ ವಿಚಾರವಾಗಿ ಏಲ್ಲೂ ಹೇಳಿಲ್ಲ. ಈ ನೋಟ್ ಬ್ಯಾನ್ ವಿರುದ್ಧ ಹೋರಾಟ ಮಾಡಲು ಇನ್ನೆರಡು ದಿನದಲ್ಲಿ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.