ವಾರಾಣಾಸಿ: ಪ್ರತಿ ಬಾರಿಯೂ ಒಂದಿಲ್ಲೊಂದು ವಿಚಾರದಲ್ಲಿ ದೇಶದ ಜನರ ಗಮನಸೆಳೆಯುವ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಸಭೆಗೆ ಬರೋವಾಗ ಮನೆಯಿಂದಲೇ ಬುತ್ತಿ ತಂದಿದ್ದಾರೆ. ಈ ಮೂಲಕ ಮತ್ತೆ ಜನರ ಮನಸೆಳೆದಿದ್ದಾರೆ.
ಲೋಕಸಭಾ ಕ್ಷೇತ್ರ ವಾರಾಣಾಸಿಯಲ್ಲಿ ಗುರುವಾರ ಬಿಜೆಪಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಬಿಜೆಪಿ ಸಭೆಯಲ್ಲಿ ಹಾಜರಾಗುವ ಕಾರ್ಯಕರ್ತರು, ಮುಖಂಡರಿಗೆ ಮಧ್ಯಾಹ್ನದ ಊಟಕ್ಕೆ ತಾವೇ ಬುತ್ತಿ ತರುವಂತೆ ಸೂಚಿಸಲಾಗಿತ್ತು. ಸಭೆಗೆ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದರು. ಈ ವೇಳೆ ಅವರು ಕೂಡ ತಮ್ಮ ಮನೆಯಿಂದಲೇ ಬುತ್ತಿ ತೆಗೆದುಕೊಂಡು ಬಂದು ಊಟ ಮಾಡುತ್ತಾ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದ್ದಾರೆ.
ಈ ಫೋಟೋವನ್ನು ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಎಲ್ಲರಂತೆಯೂ ತಾನು ಕೂಡ ಓರ್ವ ಪಕ್ಷದ ಕಾರ್ಯಕರ್ತನಾಗಿದ್ದೇನೆ. ಹಾಗಾಗಿ ಇತರ ಕಾರ್ಯಕರ್ತರಂತೆ ತಾನೂ ಬುತ್ತಿ ತೆಗೆದುಕೊಂಡು ಬಂದು ಉಟ ಮುಗಿಸಿದೆ ಅಂತಾ ಹೇಳಿದ್ದಾರೆ.