ಅಲ್ಜೀರಿಯಾ: ಮೈ ಉರಿಯುವಂತಹ ಬಿಸಿಲಿಗೆ ಹೆಸರಾಗಿರೋ ಜಗತ್ತಿನ ಅತ್ಯಂತ ದೊಡ್ಡದಾದ ಸಹಾರಾ ಮರುಭೂಮಿಯಲ್ಲಿ 37 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಮಪಾತವಾಗಿದೆ.
‘ದಿ ಗೇಟ್‍ವೇ ಟು ದಿ ಡೆಸರ್ಟ್’ ಎಂದು ಕರೆಯಲ್ಪಡುವ ಅಲ್ಜೀರಿಯನ್ ನಗರ ಐನ್ ಸೆಫ್ರಾದಲ್ಲಿ ಹಿಮಪಾತವಾಗಿದ್ದು, ಫೋಟೋಗ್ರಾಫರ್ ಕರೀಮ್ ಬೊಚಿಟಾಟಾ, ಮರುಭೂಮಿಯ ಕೆಂಪು ಮರಳಿನ ಮೇಲೆ ಹಿಮದ ಪದರವಿರುವ ಸುಂದರವಾದ ಚಿತ್ರಗಳನ್ನ ಸೆರೆಹಿಡಿದಿದ್ದಾರೆ.
ಮರುಭೂಮಿಯಲ್ಲಿ ಹಿಮಪಾತವಾಗಿರುವುದನ್ನ ಕಂಡು ಜನ ಅಚ್ಚರಿಪಟ್ಟಿದ್ದಾರೆ. ಇದು ಬಹಳ ಅಪರೂಪ ಎಂದು ಫೋಟೋಗ್ರಾಫರ್ ಕರೀಮ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಮರಳಿನ ಮೇಲೆ ಬಿದ್ದ ಹಿಮ ಕರುಗುವ ಮುನ್ನ ಒಂದು ದಿನದವರೆಗೆ ಹಾಗೇ ಇತ್ತು ಅಂತ ಕರೀಮ್ ತಿಳಿಸಿದ್ದಾರೆ. ಐನ್ ಸೆಫ್ರಾದಲ್ಲಿ 1979 ರಿಂದೀಚೆಗೆ ಹಿಮಪಾತವಾಗಿರಲಿಲ್ಲ. 1979 ರ ಫೆಬ್ರವರಿ 18ರಂದು ಇಲ್ಲಿ ಹಿಮಪಾತವಾಗಿತ್ತು. ಆದ್ರೆ ಅದು ಕೇವಲ ಅರ್ಧ ಗಂಟೆಗಳ ಕಾಲ ಮಾತ್ರ ಇತ್ತು.
ಪಶ್ಚಿಮ ಅಲ್ಜೀರಿಯಾದಲ್ಲಿರುವ ಐನ್ ಸೆಫ್ರಾ ನಗರ 1881ರಲ್ಲಿ ನಿರ್ಮಾಣವಾಗಿದ್ದು, 35 ಸಾವಿರ ಜನಸಂಖ್ಯೆ ಹೊಂದಿದೆ. ಇಲ್ಲಿನ ಬೇಸಿಗೆಯ ಉಷ್ಣಾಂಶ ಗರಿಷ್ಠ 100 ಡಿಗ್ರಿಯವರೆಗೂ ತಲುಪುತ್ತದೆ. ಆದ್ರೆ ಚಳಿಗಾಲದಲ್ಲಿ ಇಲ್ಲಿ ತಂಪಾದ ವಾತಾವರಣವಿದ್ದು, ಡಿಸೆಂಬರ್ ತಿಂಗಳಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 30 ಡಿಗ್ರಿಯಷ್ಟು ಇರುತ್ತದೆ.
ಕಳೆದ ಸೋಮವಾರದ ನಂತರ ಇಲ್ಲಿ 10 ರಿಂದ 15 ಡಿಗ್ರಿಯಷ್ಟು ಉಷ್ಣಾಂಶವಿತ್ತು ಎಂದು ಆಂಗ್ಲ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.