ಹಾಸನ: ಪ್ರೀತಿಗೆ ಜಾತಿ, ದೇಶ ಅಡ್ಡಿ ಬರುವುದಿಲ್ಲ ಎನ್ನುವಂತೆ ನಗರದಲ್ಲಿ ರಷ್ಯದ ವರನ ಜೊತೆ ಜಿಲ್ಲೆಯ ವಧು ಹಿಂದೂ ಸಂಪ್ರದಾಯದಂತೆ ಭಾನುವಾರ ಸಪ್ತಪದಿ ತುಳಿದಿದ್ದಾಳೆ.
ಹಾಸನದ ಮಂಜೇಗೌಡರ ಪುತ್ರಿಯಾದ ಪುನಿತಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಆಗಿದ್ದು ಐರ್ಲೆಂಡ್‍ನಲ್ಲಿ ನೆಲೆಸಿದ್ದಾರೆ. ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಿವಾಸಿಯಾಗಿರುವ ಕುಚಿರೊವ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಯಾವುದೋ ಒಂದು ಘಳಿಗೆಯಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿ ಈಗ ಮದುವೆಯಾಗಿದ್ದಾರೆ.
ಧರ್ಮ ಬೇರೆ ಆಗಿದ್ದರೂ ವರನ ಕಡೆಯವರು ಹಿಂದೂ ಧರ್ಮದ ಪ್ರಕಾರವೇ ಮದುವೆ ನಡೆಸಲು ಒಪ್ಪಿಗೆ ಸೂಚಿಸಿದರು. ಅದರಂತೆ ಇಬ್ಬರೂ ಈಗ ಭಾರತೀಯ ಹಿಂದೂ ಸಂಸ್ಕೃತಿಯ ಪ್ರಕಾರ ಸತಿಪತಿಯಾಗಿದ್ದಾರೆ. ರಷ್ಯನ್ ಬೀಗರು ಭಾರತೀಯ ಅತಿಥಿಗಳ ಜೊತೆ ಈ ವಿವಾಹ ಎಲ್ಲಾ ಶಾಸ್ತ್ರಗಳನ್ನು ಪಾಲಿಸುವ ಮೂಲಕ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ತಮ್ಮಿಬ್ಬರ ಪ್ರೀತಿಯನ್ನು ಪೋಷಕರ ಬಳಿ ಹೇಳಿಕೊಂಡಿದ್ದು ಅದರಂತೆ ನಮ್ಮಿಬರ ಮದುವೆ ಮಾಡಿದ್ದಾರೆ. ಮುಂದೆ ನಾವಿಬ್ಬರು ಸುಖವಾಗಿ ಸಂಸಾರ ಸಾಗಿಸುತ್ತೇವೆ ಎಂದು ವಧು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ಮದುವೆಗೆ ಇಲ್ಲಿ ನೀಡುವ ಪ್ರಾಮುಖ್ಯತೆ ಬಗ್ಗೆ ನನಗೆ ಗೊತ್ತಿದ್ದು ನಾವು ಭಾರತ ಮತ್ತು ರಷ್ಯಾ ಸಂಸ್ಕೃತಿಗಳಿಗೆ ಭಾಂದವ್ಯ ಬೆಸೆಯುವ ಸೇತುವೆ ಆಗುತ್ತೇವೆ ಎನ್ನುವ ಅಭಿಪ್ರಾಯನ್ನು ವರನಾದ ಕುಚಿರಾವ್ ವ್ಯಕ್ತಪಡಿಸಿದ್ದಾರೆ.