ಬೆಂಗಳೂರು: 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ದಿವಸ್‍ಗೆ ಕರೆ ನೀಡಿವೆ. ಆಕ್ರೋಶ್ ದಿವಸ್ ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆಯಿದೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಸಿಎಂ ಮೌಖಿಕ ಆದೇಶ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿಗೆ ಅಘೋಷಿತವಾಗಿ ರಜೆ ಘೋಷಣೆಗೆ ಸೂಚನೆ ಸಿಕ್ಕಿದೆ. ಈ ನಡುವೆ ಶಾಲಾ ಮತ್ತು ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಕ್ರೋಶ ದಿವಸ್‍ಗೆ ಪರೋಕ್ಷವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯೂ ಬೆಂಬಲ ನೀಡಿದೆ.
ರಜೆ ನೀಡುತ್ತಾ?: ಈ ಹಿಂದೆ ಕೆಎಸ್‍ಆರ್‍ಟಿಸಿ ನೌಕರರು ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ನಡೆಸಿದ ಮುಷ್ಕರದ ವೇಳೆ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ರಜೆ ಘೋಷಣೆ ಆಗಿರಲಿಲ್ಲ. ಕೆಲ ಜಿಲ್ಲೆಗಳಲ್ಲಿ ಮುಷ್ಕರ ಮೊದಲ ದಿನ ರಜೆ ನೀಡಿದ್ದರೆ ನಂತರ ರಜೆ ನೀಡಿರಲಿಲ್ಲ. ಈಗ ಈ ಆದೇಶವನ್ನು ಜಿಲ್ಲಾಧಿಕಾರಿಗಳು ಹೇಗೆ ಪಾಲನೆ ಮಾಡುತ್ತಾರೋ ಎನ್ನುವ ಕುತೂಹಲ ಹೆಚ್ಚಾಗಿದೆ.
ಕ್ಯಾಮ್ಸ್ ಬೆಂಬಲ ಇಲ್ಲ: ಖಾಸಗಿ ಶಾಲೆಗಳ ಆಡಳಿತ ಮಂಡಳಿಯಿಂದ ಆಕ್ರೋಶ್ ದೀವಸ್‍ಗೆ ಬೆಂಬಲ ಇಲ್ಲ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಆಯಾ ಶಾಲಾ ಆಡಳಿತ ಮಂಡಳಿಗಳಿಗೆ ರಜೆ ನೀಡುವ ಅಧಿಕಾರ ನೀಡಲಾಗಿದೆ. ಅವಶ್ಯಕತೆ ಬಿದ್ದರೆ ಶಾಲೆಯವರು ರಜೆ ನೀಡಬಹುದು ಎಂದು ತಿಳಿಸಿದ್ದಾರೆ.
ಸಿಎಂ ಹೇಳಿದ್ದೇನು?: ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಿಂದ ಆಕ್ರೋಶ್ ದಿವಸ್‍ಗೆ ಬೆಂಬಲ ಇದೆ. ಆದರೆ ಸರ್ಕಾರದಿಂದ ಯಾವುದೇ ರಜೆ ಘೋಷಣೆ ಇಲ್ಲ. ಎಂದಿನಂತೆ ನ.28ರಂದು ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿಗಳು ಆಯಾ ಇಲಾಖೆ ಅಧಿಕಾರಿಗಳಿಗೆ ರಜೆ ನೀಡುವಂತೆ ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ.