ಮಂಡ್ಯ: ಕಿತ್ತು ತಿನ್ನುವ ಬಡತನದ ನಡುವೆ ತನ್ನಿಬ್ಬರು ಬುದ್ಧಿಮಾಂದ್ಯ ಮಕ್ಕಳನ್ನ ಪ್ರೀತಿಯಿಂದ ಆರೈಕೆ ಮಾಡುತ್ತಿರುವ ತಾಯಿಯ ಹೆಸರು ಜಾನಕಿ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ದಾಸಪ್ಪ ಎಂಬುವವರ ಜೊತೆ ಮದುವೆಯಾಯ್ತು. ಇವರ ಊರು ಮಂಡ್ಯ. ಜಾನಕಿ ಮತ್ತು ದಾಸಪ್ಪ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಒಬ್ಬಳು ಆಕ್ಸಿಡೆಂಟ್‍ನಲ್ಲಿ ಮೃತಪಟ್ಟಿದ್ದಾಳೆ. ಇನ್ನುಳಿದ ಇಬ್ಬರು ಮಕ್ಕಳೂ ಬುದ್ಧಿ ಮಾಂದ್ಯರು. ಅವರಿಗೆ ಇಹಲೋಕದ ಪರಿವೇ ಇಲ್ಲ. ತಾಯಿ ಜಾನಕಿ ಜೊತೆಗಿದ್ದುಕೊಂಡೇ ಅವರ ಆರೈಕೆ ಮಾಡಬೇಕು. ಇಬ್ಬರು ಬುದ್ಧಿ ಮಾಂದ್ಯ ಮಕ್ಕಳು ತನಗೆ ಬೇಡ ಎಂದು ಹೃದಯ ಹೀನ ತಂದೆ ದಾಸಪ್ಪ ಮನೆಯನ್ನೇ ತೊರೆದಿದ್ದಾನೆ.
ಜಾನಕಿ ಮತ್ತು ಮಕ್ಕಳಿಗೆ ವಾಸ ಮಾಡಲು ಮುರುಕಲು ಮನೆ ಬಿಟ್ರೆ ಬೇರೆ ಏನೂ ಆಸರೆಯಿಲ್ಲ. ಇಬ್ಬರು ಮಕ್ಕಳನ್ನ ಮನೆಯಲ್ಲೇ ಬಿಟ್ಟು ಕೂಲಿ ಮಾಡಿಕೊಂಡು ಬರೋಣ ಅಂದ್ರೆ ತಾಯಿ ಜಾನಕಿಗೆ ಅದೂ ಕೂಡ ಸಾಧ್ಯವಿಲ್ಲ. ಮನೆಯಲ್ಲಿ ಊಟಕ್ಕೂ ಸಂಕಷ್ಟ ಶುರುವಾಗಿದೆ. ಯಾರಾದ್ರೂ ಒಂದು ಹಸುವನ್ನು ಕೊಡಿಸಿದ್ರೆ ಹಸುವಿನ ಹಾಲನ್ನು ಮಾರಿ ಹೇಗಾದ್ರೂ ಜೀವನ ಸಾಗಿಸುತ್ತೇನೆ ಎನ್ನುತ್ತಾರೆ ಜಾನಕಿ.
ಕಿತ್ತು ತಿನ್ನುವ ಬಡತನದ ನಡುವೆ ಜಾನಕಿ ಮಕ್ಕಳನ್ನ ಸಾಕುತ್ತಿದ್ದಾರೆ. ಆದರೆ ಮುಂದೆ ಜೀವನ ನಡೆಯಲು ಏನಾದ್ರೂ ಕೆಲಸ ಮಾಡಲೇ ಬೇಕು. ಅದಕ್ಕಾಗಿ ಹಸು ಸಾಕಾಣಿಕೆನಾದ್ರೂ ಮಾಡೋಣ ಅನ್ನೋದು ಜಾನಕಿ ಆಸೆ. ಬಡತನದಲ್ಲಿ ಬೇಯುತ್ತಿರುವ ಈ ಕುಟುಂಬಕ್ಕೆ ಸಹಾಯ ದೊರಕಿದ್ರೆ ಒಂದು ಕುಟುಂಬಕ್ಕೆ ಬೆಳಕು ಸಿಕ್ಕಂತಾಗುತ್ತದೆ.