ನವದೆಹಲಿ: ಶೀಘ್ರವೇ ಚಿನ್ನಾಭರಣ ಅಥವಾ ಬಂಗಾರದ ಗಟ್ಟಿ ಹೊಂದಿರುವವರಿಗೆ ಮಿತಿ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎನ್ನುವ ಸುದ್ದಿಯನ್ನು ಹಣಕಾಸು ಇಲಾಖೆಯ ನಿರಾಕರಿಸಿದೆ.
ಇದುವರೆಗೆ ಚಿನ್ನಕ್ಕೆ ಮಿತಿ ಹೇರುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿಲ್ಲ ಎಂದು ಹಣಕಾಸು ಇಲಾಖೆಯೆ ಮೂಲಗಳು ಮಾಹಿತಿ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.
500, 1 ಸಾವಿರ ರೂ. ನೋಟ್ ನಿಷೇಧಗೊಂಡ ಬಳಿಕ ಅದಾಯದ ಮೂಲಕ್ಕಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಅಥವಾ ಬಂಗಾರದ ಗಟ್ಟಿ ಹೊಂದಿರುವವರಿಗೆ ಗತಿ ಕಾಣಿಸಲು ಮುಂದಿನ ದಿನಗಳಲ್ಲಿ ಸರ್ಕಾರ ಖಡಕ್ ನಿರ್ಧಾರ ಕೈಗೊಳ್ಳಲಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.
ಗುರುವಾರ ರಾತ್ರಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ಕುರಿತ ದೀರ್ಘ ಚರ್ಚೆ ನಡೆದ ಬಗ್ಗೆ ಮಾಹಿತಿ ಇಲ್ಲವಾದರೂ ಸರ್ಕಾರದ ಮಟ್ಟದಲ್ಲಂತೂ ಗಂಭೀರ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗುತಿತ್ತು
ನೋಟ್ ನಿಷೇಧಗೊಂಡ ಬಳಿಕ 2 ವರ್ಷದ ಅವಧಿಯಲ್ಲಿ ಕಳೆದ ವಾರ ದೇಶದಲ್ಲಿ ಅತ್ಯಧಿಕ ಪ್ರಮಾಣದ ಚಿನ್ನದ ಮಾರಾಟವಾಗಿದೆ. ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿ ಭಾರತವಿದ್ದು, ವಾರ್ಷಿಕವಾಗಿ ಖರೀದಿಯಾಗುವ ಸುಮಾರು 1 ಸಾವಿರ ಟನ್ ಚಿನ್ನವನ್ನು ಕಪ್ಪು ಹಣ ನೀಡಿ ಖರೀದಿಸಲಾಗುತ್ತಿದೆ ಎನ್ನುವ ಅಂದಾಜಿದೆ.
ನವೆಂಬರ್ 8ರಂದು ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಕೆಲವೇ ಕ್ಷಣಗಳಲ್ಲಿ ಜನರು ಜುವೆಲ್ಲರಿ ಅಂಗಡಿಗಳಲ್ಲಿ ದೌಡಾಯಿಸಿ ಚಿನ್ನವನ್ನು ಖರೀದಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ಜುವೆಲ್ಲರಿ ಅಂಗಡಿಗಳಲ್ಲಿ ರಾತ್ರಿ 8 ಗಂಟೆಯ ನಂತರ ವ್ಯವಹಾರ ನಡೆಸಿದ ಗ್ರಾಹಕರ ವಿವರ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಸಿಸಿಟಿವಿ ದೃಶ್ಯಾವಳಿಯನ್ನು ನೀಡುವಂತೆ ಸೂಚಿಸಿದೆ.