ಮನೇಲಿ ಸಾಮಾನ್ಯವಾಗಿ ಒಡಹುಟ್ಟಿದವರು ಕೀಟಲೆ ಮಾಡೋದು, ಪರಸ್ಪರ ಜಗಳ ಆಡೋದು, ಅಮ್ಮನ ಹತ್ತಿರ ಹೋಗಿ ಇನ್ನೊಬ್ಬರ ಮೇಲೆ ಚಾಡಿ ಹೇಳೋದು ಇದೆಲ್ಲಾ ಇದ್ದಿದ್ದೇ. ಅಣ್ಣ, ತಂಗಿ, ಅಕ್ಕ ಅಥವಾ ತಮ್ಮನಿಗೆ ಅಮ್ಮ ಬೈದ್ರೆ ಮತ್ತೊಬ್ಬರು ಮಜಾ ತಗೋತಾ ಇರ್ತಾರೆ. ಆದ್ರೆ ಇಲ್ಲೊಂದು ಪುಟ್ಟ ಕಂದಮ್ಮ ತನ್ನ ಅಕ್ಕನಿಗೆ ಬೈಬೇಡ ಅಂತ ಅಮ್ಮನಿಗೆ ಕೈ ತೋರಿಸುತ್ತಾ ಅವಾಜ್ ಹಾಕೋ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೆಲಿಸ್ಸಾ ನ್ಯೂನೆಝ್ ಎಂಬವರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ತಾಯಿ ತನ್ನ ಮಗಳು ಎಮಾಗೆ ಹಾಗೆ ಸುಮ್ಮನೆ ಬೈಯ್ಯುತ್ತಿದ್ದರೆ ಪುಟ್ಟ ಮಗು, ನೋ ಮೊಮ್ಮಿ ನೋ ಅಂತ ಅಮ್ಮನನ್ನ ತಡೆಯುತ್ತದೆ. ತಾಯಿ ಜೆಸ್ಸಿಕಾ ಎಲ್ಸಿ ಬೇಕಂತಲೇ ಪದೇ ಪದೇ ಎಮಾಳನ್ನು ಬೈಯ್ಯಲು ಶುರು ಮಾಡಿದಾಗಲೆಲ್ಲಾ ಪುಟ್ಟ ಮಗು ಕೂಡ ಬೇಡ ಅಮ್ಮಾ… ಅಂತ ವಾರ್ನಿಂಗ್ ಕೊಡುತ್ತದೆ.
ಕೊನೆಗೆ ಎಮಾ ಪುಟ್ಟ ತಂಗಿಯನ್ನ ತಬ್ಬಿಕೊಂಡಾಗ ಮಗು ಕೂಡ ಅಕ್ಕನನ್ನ ಬಿಗಿದಪ್ಪುತ್ತದೆ. ನಂತರವೂ ಆಕೆಯ ಅಮ್ಮ, ಎಮಾ ತಪ್ಪು ಮಾಡಿದ್ದಾಳೆ ಅಂತ ಮಗುವನ್ನು ರೇಗಿಸಿದಾಗ ಆ ಕಂದ ಅಮ್ಮನಿಗೆ ಒಂದು ಏಟು ಕೂಡ ಕೊಡುತ್ತದೆ. 56 ಸೆಕೆಂಡ್‍ಗಳ ಈ ವಿಡಿಯೋ ಸಖತ್ ವೈರಲ್ ಆಗಿದೆ. ಫೇಸ್‍ಬುಕ್‍ನಲ್ಲಿ ಈಗಾಗಲೇ ಈ ವಿಡಿಯೋ 14.9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 2.6 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.