ಆನೇಕಲ್: ಇತ್ತೀಚಿಗೆ ನಗರದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಚಿವ ರೋಷನ್ ಬೇಗ್ ಅವರು ಸುಪಾರಿ ನೀಡಿದ್ದಾರೆ ಎಂಬುವುದಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗಂಭೀರವಾಗಿ ಆರೋಪಿಸಿದ್ದು, ಈ ಮೂಲಕ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತು ಸಿಓಡಿ ಸಂಸ್ಥೆಗಳ ತನಿಖೆ ಬಗ್ಗೆ ನಮಗೆ ನಂಬಿಕೆಯಿಲ್ಲ. ಹೀಗಾಗಿ ಎನ್‍ಐಎಯಿಂದಲೇ ತನಿಖೆಯಾಗಬೇಕು. ರೋಷನ್ ಬೇಗ್‍ರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದ ಅವರು, ಇಲ್ಲವೆಂದಲ್ಲಿ ಈ ತಿಂಗಳ 8ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕರಂದ್ಲಾಜೆ ಆರೋಪಕ್ಕೆ ಸಿ.ಟಿ.ರವಿ ಹಾಗೂ ಗೋ.ಮಧುಸೂದನ್ ಧ್ವನಿಗೂಡಿಸಿದ್ದಾರೆ. ನಾವು ಮೊದಲಿನಿಂದಲೂ ರುದ್ರೇಶ್ ಹತ್ಯೆ ಅಂತರಾಷ್ಟ್ರೀಯ ಪಿತೂರಿಯೆಂದು ತಿಳಿಸಿದ್ದೆವು. ಯಾಕೆಂದ್ರೆ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿರುವ ರೀತಿ ನಮ್ಮ ಆರೋಪಕ್ಕೆ ಪುಷ್ಠಿ ನೀಡುತ್ತಿದೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಐಎಸ್‍ಐ ಸಹ ಭಾಗಿಯಾಗಿದೆಯೆಂದು ಗೋ.ಮಧುಸೂದನ್ ಅವರು ಆರೋಪಿಸಿದ್ದಾರೆ. ಇನ್ನು ಪ್ರಕರಣ ಸಂಬಂಧಿಸಿದಂತೆ ರೋಶನ್ ಬೇಗ್ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಅವರು ಆಗ್ರಹಿಸಿದರು.