ಬೀಜಿಂಗ್: ರಾತ್ರಿ ವೇಳೆ ವಾಹನಗಳಲ್ಲಿ ಹೈ ಬೀಮ್ ಲೈಟ್ ಬಳಸೋದ್ರಿಂದ ಎದುರುಗಡೆಯಿಂದ ಬರೋ ವಾಹನ ಚಾಲಕರಿಗೆ ತೊಂದರೆಯಾಗಿ ಅಪಘಾತವಾಗೋ ಸಂಭವ ಹೆಚ್ಚು. ಹೀಗಾಗಿ ಹೈ ಬೀಮ್ ಲೈಟ್ ಬಳಸದಂತೆ ಸಂಚಾರಿ ಪೊಲೀಸರು ಹೇಳುತ್ತಲೇ ಇರುತ್ತಾರೆ. ಅದ್ರೆ ಅದನ್ನೂ ಮೀರಿ ಕೆಲವರು ಹೆಚ್ಚು ಪ್ರಕಾಶಿಸುವಂತಹ ಲೈಟ್ ಬಳಸ್ತಾರೆ. ಚೀನಾದಲ್ಲಿ ಹೀಗೆ ಹೈ ಬೀಮ್ ಲೈಟ್ ಬಳಸಿದ ಚಾಲಕರಿಗೆ ಇಲ್ಲಿನ ಪೊಲೀಸರು ಶಿಕ್ಷೆ ನೀಡಿದ್ದಾರೆ.
ವಾಹನದ ಹೆಡ್‍ಲೈಟ್ ಹಾಕಿ, ಹೈ ಬೀಮ್ ಲೈಟ್ ಬಳಸಿದ ಚಾಲಕರನ್ನ ಒಂದು ನಿಮಿಷದವರೆಗೆ ಅದರ ಮುಂದೆ ಕೂರಿಸಿ ಶಿಕ್ಷಿಸಿದ್ದಾರೆ. ಶೆನ್‍ಝೆನ್‍ನ ಸಂಚಾರಿ ಪೊಲೀಸರು ಚೀನಾದ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷೆ ನೀಡುತ್ತಿರುವುದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಚೇರ್ ಮೇಲೆ ಚಾಲಕರನ್ನ ಕೂರಿಸಿ, ಹೈ ಬೀಮ್ ಹೆಡ್‍ಲೈಟ್ ನೇರವಾಗಿ ಮುಖಕ್ಕೆ ರಾಚುವಂತೆ ಮಾಡಿ ಶಿಕ್ಷೆ ನೀಡಿದ್ದಾರೆ.
ಚೀನಾದಲ್ಲಿ ಹೈ ಬೀಮ್ ಲೈಟ್ ಬಳಸುವವರಿಗೆ 3 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದ್ರೆ ದಂಡದ ಬದಲಾಗಿ ಈ ಶಿಕ್ಷೆ ನೀಡಲಾಗಿದೆಯೋ ಅಥವಾ ದಂಡದ ಜೊತೆಗೆ ಇದು ಮುಂದುವರಿದ ಶಿಕ್ಷೆಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಈ ಫೋಟೋಗಳನ್ನ ನೋಡಿದ ಕಲವರು ಇದು ಮಾನವ ಹಕ್ಕುಗಳಿಗೆ ವಿರುದ್ಧವಾದುದು ಎಂದು ಕಮೆಂಟ್ ಮಾಡಿದ್ದಾರೆ. ಆದ್ರೆ ಹೈ ಬೀಮ್ ಲೈಟ್‍ಗಳಿಂದ ಬೇಸತ್ತವರು ಪೊಲೀಸರು ನೀಡಿದ ಶಿಕ್ಷೆಯನ್ನ ಬೆಂಬಲಿಸಿದ್ದಾರೆ. ಒಂದು ನಿಮಿಷ ಅಷ್ಟೆನಾ..? ತುಂಬಾ ಕಡಿಮೆಯಾಯ್ತು ಅಂತ ಮತ್ತೊಬ್ಬ ವೀಬೋ ಬಳಕೆದಾರರು ಕಮೆಂಟಿಸಿದ್ದಾರೆ.