– ವಿಶ್ವದ ಕ್ಷಿಪಣಿಗಳಲ್ಲೇ ಪ್ರಬಲ ಕ್ಷಿಪಣಿ ಸತಾನ್-2
ಮಾಸ್ಕೋ: ರಷ್ಯಾ ಮೂರನೇ ಮಹಾಯುದ್ಧಕ್ಕೆ ಅಣಿಯಾಗುತ್ತಿದ್ದು ಅಮೆರಿಕ ವಿರುದ್ಧದ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ ತನ್ನ ಪ್ರಬಲ ಪರಮಾಣು ಕ್ಷಿಪಣಿಯೊಂದರ ಚಿತ್ರವನ್ನು ಬಿಡುಗಡೆ ಮಾಡಿದೆ.
ಆರ್‍ಎಸ್-28 ಅಥವಾ ಸತಾನ್-2 ಹೆಸರಿನ ಈ ಕ್ಷಿಪಣಿ ಇದುವರೆಗಿನ ಕ್ಷಿಪಣಿಗಳಲ್ಲಿ ಪ್ರಬಲವಾಗಿದ್ದು, 2020ಕ್ಕೆ ರಷ್ಯಾ ಸೇನೆಗೆ ಈ ಕ್ಷಿಪಣಿ ಸೇರ್ಪಡೆಯಾಗಲಿದೆ. ಥರ್ಮೋನ್ಯೂಕ್ಲಿಯರ್ ಖಂಡಾಂತರ ಕ್ಷಿಪಣಿ ಸೆಕೆಂಡ್‍ಗೆ 7 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದು 10 ಸಾವಿರ ಕಿಲೋ ಮೀಟರ್ ದೂರದವರೆಗಿನ ಶತ್ರುಗಳ ನೆಲೆಯನ್ನು ಧ್ವಂಸಗೊಳಿಸಬಲ್ಲುದು.
ಒಂದು ವೇಳೆ ಈ ಕ್ಷಿಪಣಿ ಸ್ಟೋಟಗೊಂಡರೆ ಅಮೆರಿಕ ಎರಡನೇ ದೊಡ್ಡ ರಾಜ್ಯವಾಗಿರುವ 268,581 ಚದರ ಮೈಲಿ(6,96,241 ಕಿ.ಮೀ) ಹೊಂದಿರುವ ಟೆಕ್ಸಾಸ್ ರಾಜ್ಯವೇ ಅಥವಾ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕ ಜಪಾನಿನ ನಾಗಸಾಕಿ ಮತ್ತು ಹಿರೋಶಿಮಾದ ಮೇಲೆ ಪ್ರಯೋಗಿಸಿದ ಬಾಂಬ್‍ಗಿಂತ 200 ಪಟ್ಟು ಹೆಚ್ಚಿನ ಸಾಮರ್ಥ್ಯ ವನ್ನು ಈ ಕ್ಷಿಪಣಿ ಹೊಂದಿದೆ.
ಅಮೆರಿಕ ಮತ್ತು ಯುರೋಪ್ ಖಂಡದ ದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಈ ಕ್ಷಿಪಣಿ ನಿರ್ಮಾಣ ಯೋಜನೆಗೆ ಕೈ ಹಾಕಿದೆ. ಶತ್ರು ದೇಶಗಳ ರೇಡಾರ್ ಕಣ್ಣಿಗೂ ಕಾಣದಂತೆ ಸ್ಟೀಲ್ತ್ ಟೆಕ್ನಾಲಜಿ (ರಹಸ್ಯ ತಂತ್ರಜ್ಞಾನ) ಬಳಸಿಕೊಂಡು ಈ ಕ್ಷಿಪಣಿ ತಯಾರಿಸಲಾಗಿದೆ. ರಷ್ಯಾದ ಸತಾನ್ -2 ಕ್ಷಿಪಣಿಯ ಚಿತ್ರವನ್ನು ರಷ್ಯಾದ Makeyev Rocket Design Bureau ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಮೊದಲ ಸತಾನ್ ಕ್ಷಿಪಣಿ 1970ರಲ್ಲಿ ನಿರ್ಮಾಣವಾಗಿತ್ತು.
ನಾಗಸಾಕಿ ಮತ್ತು ಹಿರೋಶಿಮಾದ ಮೇಲೆ ಬಿದ್ದ ಅಣುಬಾಂಬ್‍ನಿಂದಾಗಿ ಕನಿಷ್ಟ 1.29 ಲಕ್ಷ ಜನ ಮೃತಪಟ್ಟಿದ್ದರು.