ಭುವನೇಶ್ವರ್: ಒರಿಸ್ಸಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರದಂದು ಅಗ್ನಿ ಅವಘಢ ಸಂಭವಿಸಿದೆ. ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಸಂಜೆ 7.30ರ ವೇಳೆಗೆ ಭುವನೇಶ್ವರ್‍ನ ಎಸ್‍ಯುಎಮ್ ಆಸ್ಪತ್ರೆಯಲ್ಲಿ ಈ ಅವಘಡ ಸಂಭವಿಸಿದೆ. ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿನ ಡಯಾಲಿಸಿಸ್ ರೂಮ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿದ್ದು, ನಂತರ ಐಸಿಯು ಹಾಗೂ ಇತರೆ ವಾರ್ಡ್‍ಗಳಿಗೆ ಬೆಂಕಿ ವ್ಯಾಪಿಸಿದೆ. ಈ ವೇಳೆ ಆಸ್ಪತ್ರೆಯಲ್ಲಿ ರೋಗಿಗಳೂ ಸೇರಿದಂತೆ 500 ಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲಿ ಇದ್ದರು ಎನ್ನಲಾಗಿದೆ.
ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದು, ರೋಗಿಗಳನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಮೋದಿ ಟ್ವಿಟ್ಟರ್‍ನಲ್ಲಿ ಹೇಳಿದ್ದಾರೆ. ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರೋಗಿಗಳ ಆರೋಗ್ಯ ವಿಚಾರಿಸಿದ್ದು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದಾರೆ.
ದಕ್ಷಿಣ ಮುಂಬೈನ ಕಫಲ್ ಪರೇಡ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೂಡ ಅಗ್ನಿ ಅವಘಡ ಸಂಭವಿಸಿದ್ದು ಇಬ್ಬರು ಸಜೀವ ದಹನವಾಗಿದ್ದಾರೆ. ಇಂದು ಬೆಳಿಗ್ಗೆ 6.30ರ ವೇಳೆಯಲ್ಲಿ ಕಟ್ಟಡದ 20ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. 8 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 11 ಮಂದಿಯನ್ನ ರಕ್ಷಿಸಲಾಗಿದೆ.