ಕಲಬುರಗಿ: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆ ಚಿಂಚೋಳಿಯ ಐಪಿ ಹೊಸಳ್ಳಿ ಗ್ರಾಮದಲ್ಲಿ ಭೂಕಂಪದಿಂದ ಜನ ತತ್ತರಿಸಿದ್ದಾರೆ. ಅದರಲ್ಲಿಯೂ ಕಳೆದ ಎರಡು ದಿನಗಳಲ್ಲಿಯೇ ಕನಿಷ್ಠ 8 ಬಾರಿ ಭೂಮಿ ಕಂಪಿಸಿದೆ. ಇದರಿಂದ ಗ್ರಾಮದ ಜನ ಮನೆಗಳನ್ನು ತೊರೆದು ಗ್ರಾಮದ ಕಟ್ಟೆಗಳ ಮೇಲೆ ವಾಸಿಸುತ್ತಿದ್ದಾರೆ. ಇನ್ನೂ ಕೆಲ ಗ್ರಾಮಸ್ಥರು ಗ್ರಾಮವನ್ನು ತೊರೆದು ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಇನ್ನೂ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬೆಂಗಳೂರಿನಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮದ ಅಂಗನವಾಡಿ ಕೇಂದ್ರದಲ್ಲಿಯೇ ರಿಕ್ಟರ್ ಮಾಪನವನ್ನು ಅಳವಡಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಯೋಜನಾ ವಿಜ್ಞಾನಿ ಡಾ.ರಮೇಶ್, ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ, ಭೂಮಿಯಲ್ಲಿ ಮೇಲಿಂದ ಮೇಲೆ ಉಂಟಾಗುವ ನೈಸರ್ಗಿಕ ಕ್ರಿಯೆಗಳಿಂದ ಕಂಪನವಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿರುವ ಶಿಥಿಲಾವಸ್ಥೆಯ ಮನೆಗಳನ್ನು ತೊರೆಯಲು ಸಲಹೆ ನೀಡಿದರು. ಭಾರವಾದ ವಸ್ತುಗಳನ್ನು ಮೇಲೆ ಇಡಬೇಡಿ. ಈಗ ಸದ್ಯ ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 2ರೊಳಗೆ ದಾಖಲಾಗುವ ಕಂಪನ ಯಾವುದೇ ದೊಡ್ಡ ಅನಾಹುತ ಮಾಡಲ್ಲ ಎಂದು ಹೇಳಿದರು.
ಗ್ರಾಮಸ್ಥರು ಹೇಳೋದೇನು?: ದಸರಾ ಹಬ್ಬವನ್ನು ನಾವು ಆತಂಕದಿಂದಲೇ ಮಾಡಿದೆವು. ಮೊಹರಂಗೂ ಇದೇ ರೀತಿಯಾಯಿತು ಎಂದು ಗ್ರಾಮಸ್ಥ ಶಿವಕುಮಾರ್ ಪಾಟೀಲ್ ಹೇಳಿದರು. ಕೋರೆಯಲ್ಲಿ ಸ್ಫೋಟವಾದಂತೆ ಕಂಪನದ ಅನುಭವ ನಮಗಾಗುತ್ತಿದೆ. ಗ್ರಾಮದಲ್ಲಿ ಎಲ್ಲಾ ಕಡೆ ಇದೇ ಅನುಭವವಾಗುತ್ತಿದೆ. ನಿನ್ನೆ 25 ಜನ ಆತಂಕದಿಂದ ಊರು ಬಿಟ್ಟು ಹೋಗಿದ್ದಾರೆ. ಇನ್ನು ಉಳಿದವರೂ ಹಾಗೇ ಹೋಗುತ್ತಾರೇನೋ ಎಂಬ ಆತಂಕವಿದೆ. ಈಗ 1.6 ತೀವ್ರತೆಯ ಕಂಪನ ಅನುಭವವಾಗಿದೆ. ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಬೇಕು ಎಂದು ಅವರು ಗ್ರಾಮಸ್ಥರ ಪರವಾಗಿ ಮಾತನಾಡಿದರು.
1992ರಲ್ಲಿ ಮಹಾರಾಷ್ಟ್ರದ ಖಿಲಾರಿಯಲ್ಲಿ ಆದ ಭೂಕಂಪದ ಸಮಯದಲ್ಲಿ ಸಹ ಇಲ್ಲಿ ಭೂಕಂಪವಾಗಿತ್ತು. ಇದೀಗ ಮತ್ತೆ ಭೂಮಿ ಕಂಪಿಸಲು ಆರಂಭಿಸಿದ್ದು ಗ್ರಾಮದ ಜನರಲ್ಲಿ ಭಯ ಆವರಿಸಿದೆ.
