ಮೈಸೂರು: ನಾಡಿಗೆ ಮಳೆ ಇಲ್ಲದ ಸಂಕಷ್ಟ ಕಾಲದಲ್ಲೂ, ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ, ಪರಂಪರೆಗೆ ಯಾವುದೇ ಅಡ್ಡಿಯಾಗದಂತೆ ದಸರಾ ಆಚರಿಸಲಾಯಿತು. ಸ್ವಚ್ಛತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ನಗರಿಯಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ ಅದ್ಧೂರಿಯಾಗಿ ನಡೀತು.
ಈ ವರ್ಷ ಸ್ವಲ್ಪ ತಡವಾಗಿ ಅಂದ್ರೆ ಸಂಜೆ 5.15ಕ್ಕೆ ಜಂಬೂ ಸವಾರಿಗೆ ಅರಮನೆ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಅರ್ಜುನ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ರೆ, ಅಕ್ಕಪಕ್ಕದಲ್ಲಿ ವಿಜಯ ಮತ್ತು ಕಾವೇರಿ ಆನೆಗಳು ಹೆಜ್ಜೆ ಹಾಕಿದವು.
ಸಂಜೆ 6.50ಕ್ಕೆ ಜಂಬೂ ಸವಾರಿ ಬನ್ನಿ ಮಂಟಪ ತಲುಪಿತು. ಒಟ್ಟು 5 ಕಿಲೋ ಮೀಟರ್ ದೂರವನ್ನು 1 ಗಂಟೆ 45 ನಿಮಿಷದಲ್ಲಿ ಅಂಬಾರಿ ಹೊತ್ತು ಅರ್ಜುನ ಸಾಗಿದ. ಈ ನಯನ ಮನೋಹರ ಕ್ಷಣವನ್ನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಲಕ್ಷಾಂತರ ಜನ ಕಣ್ಮನ ತುಂಬಿಕೊಂಡರು. ಮನೆಗಳು, ಕಾಂಪೌಂಡ್ ಮೇಲೆಲ್ಲಾ ಜನ ನಿಂತು ಜಂಬೂ ಸವಾರಿ ನೋಡಿ ಪುಳಕಿತರಾದ್ರು.
ಅರ್ಜುನನಿಗೆ ಇದು 5ನೇ ಜಂಬೂ ಸವಾರಿ. ಅರಮನೆಗೆ ಬರುವ ಮುನ್ನ 5,615 ಕೆಜಿಯಿದ್ದ ಅರ್ಜುನ ಈಗ 225 ಕೆಜಿ ಹೆಚ್ಚಾಗಿದ್ದಾನೆ. ಅಭಿಮನ್ಯು 435 ಕೆಜಿ ಹೆಚ್ಚಾದರೆ ಬಲರಾಮ ಬರೋಬ್ಬರಿ 655 ಕೆಜಿ ಹೆಚ್ಚಾಗಿದ್ದಾನೆ.. ಈ ಮಧ್ಯೆ ಆನೆಗಳು ಬೆದರುವ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಜಂಬೂ ಸವಾರಿ ವೇಳೆ ಹೆಲಿಕಾಪ್ಟರ್ ರೈಡ್ ಸ್ಥಗಿತಗೊಳಿಸಲಾಗಿತ್ತು.
ಈ ನಡುವೆ ಮಧ್ಯಾಹ್ನ ಮಳೆ ಶುರುವಾದ ಕಾರಣ ಅರ್ಜುನ ಸ್ವಲ್ಪ ಹೊತ್ತು ಸೈಲೆಂಟಾಗಿದ್ದ. ಯಾವುದೇ ಕಾರಣಕ್ಕೂ ಒಂದು ಹೆಜ್ಜೆ ಮುಂದೆ ಇಟ್ಟಿರಲಿಲ್ಲ. ತನ್ನ ಹಳೇ ಮಾವುತ ದೊಡ್ಡ ಮಾಸ್ತಿಯನ್ನು ನೆನಪಿಸಿಕೊಂಡು ಅರ್ಜುನ ಸ್ವಲ್ಪ ಹೊತ್ತು ಮಂಕಾಗಿ ನಿಂತಿದ್ದ. ಇನ್ನು ಬೆಳಗ್ಗೆ 6 ಗಂಟೆಗೆ ಅರಮನೆಯಲ್ಲಿ ಯದುವೀರ್ ಒಡೆಯರ್ ಅಲಮೇಲಮ್ಮ ದೇವಿಗೆ ಪೂಜೆ ನೆರವೇರಿಸಿದ್ರು. ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಮಾಡಿದ್ರು. ಮಧ್ಯಾಹ್ನ 42 ಸ್ತಬ್ಧಚಿತ್ರಗಳ ಮೆರವಣಿಗೆ ಸಾಗ್ತು. ಈ ಟ್ಯಾಬ್ಲೋ ಪ್ರದರ್ಶನದಲ್ಲಿ ನಾಡಿನ ಕಲಾ ಶ್ರೀಮಂತಿಕೆಯ ಅನಾವರಣವಾಯ್ತು.
ದಸರೆಗೆ ಮಳೆ: ಈ ವರ್ಷ ಮಳೆ ಇಲ್ಲದೇ ರಾಜ್ಯದ ಜನ ಬಸವಳಿದಿದ್ದಾರೆ. ಅದರಲ್ಲೂ ಕಾವೇರಿ ಕೊಳ್ಳದ ಜನರಂತೂ ನೀರಿಗಾಗಿ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ನಮಗೆ ನೀರಿಲ್ಲದಿದ್ರೂ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡ್ತಿದ್ದೇವೆ. ಶುಭ ಸುದ್ದಿ ಅಂದ್ರೆ ಈ ವಿಜಯದಶಮಿ ದಿನ ಸಿಎಂ ನಂದಿಧ್ವಜಕ್ಕೆ ಪೂಜೆ ಮಾಡುವ ಮುನ್ನವೇ ತುಂತುರು ಮಳೆ ಶುರುವಾಯ್ತು. ಆಮೇಲೆ ಮಳೆ ಅಬ್ಬರ ಜೋರಾಯ್ತು.
ವಿದೇಶಿಗರೂ ಸೇರಿದಂತೆ ದಸರಾ ನೋಡಲು ಬಂದಿದ್ದ ಜನ ಮಳೆಯನ್ನೂ ಲೆಕ್ಕಿಸದೇ ಕುರ್ಚಿಗಳನ್ನು ತಲೆ ಮೇಲೆ ಉಲ್ಟಾ ಮಾಡಿಕೊಂಡು ದಸರಾ ವೀಕ್ಷಿಸಿದ್ರು. ಸಂಜೆ ವೇಳೆಗೂ ಭಾರೀ ಮಳೆಯಾಯ್ತು. ಕಳೆದ 18 ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ವಿಜಯದಶಮಿ ದಿನ ಮಳೆ ಬಂದಿದೆ. ಆದರೆ ಇಷ್ಟೊಂದು ಜೋರಾಗಿ ಯಾವತ್ತೂ ಮಳೆ ಬಂದಿರಲಿಲ್ಲ. ಇದು ತುಂಬಾ ಶುಭ ಸುದ್ದಿ ಅಂತಾ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.