ಸುಂದರವಾದ ಕಣ್ಣುಗಳಿಗೆ ತಿದ್ದಿತೀಡಿದಂತಹ ಹುಬ್ಬು ಮತ್ತಷ್ಟು ಮೆರುಗು ಕೊಡುತ್ತದೆ. ಐಬ್ರೋ ಥ್ರೆಡಿಂಗ್ ಮಾಡಿಸಿದಾಗ ಒಂದು ವೇಳೆ ಹುಬ್ಬಿನ ಆಕಾರ ಕೆಟ್ಟರೆ ಹೆಣ್ಣುಮಕ್ಕಳಿಗೆ ಅದಕ್ಕಿಂತ ಬೇಜಾರು ಮತ್ತೊಂದಿಲ್ಲ. ಅದಕ್ಕೆ ಐಬ್ರೋ ಥ್ರೆಡಿಂಗ್ ಮಾಡಿಸುವಾಗ ಈ 5 ವಿಷಯಗಳನ್ನ ಖಂಡಿತ ಮರೆಯದಿರಿ.
1. ಮೊದಲ ಬಾರಿ ಐಬ್ರೋ ಥ್ರೆಡಿಂಗ್ ಮಾಡಿಸುವಾಗ:
ಮೊದಲ ಬಾರಿಗೆ ಐಬ್ರೋ ಥ್ರೆಡಿಂಗ್ ಮಾಡಿಸುವಾಗ ಪಾರ್ಲರ್‍ಗೆ ಹೋಗೋ ಮೊದಲೇ ಐಸ್‍ಕ್ಯೂಬ್‍ಗಳನ್ನ ಹುಬ್ಬಿನ ಮೇಲೆ ಉಜ್ಜಿ ನಂತರ ಥ್ರೆಡಿಂಗ್ ಮಾಡಿಸಿಕೊಳ್ಳಿ. ಇದರಿಂದ ಥ್ರೆಡಿಂಗ್ ಮಾಡಿದಾಗ ಕಡಿಮೆ ನೋವಾಗುತ್ತದೆ.
2. ಪಾರ್ಲರ್ ಬದಲಾಯಿಸುವ ಮುನ್ನ ಯೋಚಿಸಿ:
ಯಾವುದಾದ್ರೂ ಸಲೂನ್‍ನಲ್ಲಿ ಐಬ್ರೋ ಥ್ರೆಡಿಂಗ್ ಮಾಡಿಸಿದಾಗ ನಿಮಗೆ ಶೇಪ್ ಮಾಡಿರುವುದು ಚೆನ್ನಾಗಿಲ್ಲ ಅಂತ ಅನ್ನಿಸಿದ್ರೆ ಮುಂದಿನ ಬಾರಿ ಬೇರೆ ಪಾರ್ಲರ್‍ಗೆ ಹೋಗೋದು ಉತ್ತಮ. ಐಬ್ರೋ ಶೇಪ್ ಪರ್ಫೆಕ್ಟ್ ಆಗಿದೆ ಅಂತ ಅನ್ನಿಸಿದ್ರೆ ಅದೇ ಪಾರ್ಲರ್‍ಗೆ ಹೋಗೋದನ್ನ ರೂಢಿಸಿಕೊಳ್ಳಿ. ಪದೇ ಪದೇ ಪಾರ್ಲರ್ ಬದಲಾಯಿಸಬೇಡಿ.
3. ಮಾಯ್‍ಶ್ಚರೈಸರ್ ಹಚ್ಚುವಂತೆ ಕೇಳಿ:
ಥ್ರೆಡಿಂಗ್ ಮಾಡಿಸಿದ ನಂತರ ಹುಬಬಿನ ಮೇಲೆ ಜೆಲ್ ಅಥವಾ ಮಾಯ್‍ಶ್ಚರೈಸರ್ ಹಚ್ಚಲು ಪಾರ್ಲರ್‍ನವರಿಗೆ ಹೇಳಿ. ಇದರಿಂದ ರ್ಯಾಶಸ್ ಆಗುವುದು ತಪ್ಪುತ್ತದೆ. ಥ್ರೆಡಿಂಗ್‍ನ ಉರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಮನೆಗೆ ಹೋದ ಮೇಲೆ ಮುಖ ತೊಳೆದು ರೋಸ್‍ವಾಟರ್ ಹಚ್ಚಿ ಹಾಗೇ ಬಿಡಿ. 3-4 ಗಂಟೆಗಳವರೆಗೆ ಕ್ರೀಂ ಹಚ್ಚಬೇಡಿ.
4. ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಶೇಪ್ ಮಾಡಿಸಿಕೊಳ್ಳಿ:
ಎಲ್ಲರ ಮುಖಕ್ಕೂ ಒಂದೇ ರೀತಿಯ ಐಬ್ರೋ ಶೇಪ್ ಒಗ್ಗುವುದಿಲ್ಲ. ಕೆಲವರಿಗೆ ಬಿಲ್ಲಿನಂತ ಆಕಾರ ಸೂಟ್ ಆಗುತ್ತದೆ. ಮತ್ತೆ ಕೆಲವರಿಗೆ ತ್ರಿಕೋನದಂತೆ ಪಯಿಂಟೆಡ್ ಶೇಪ್ ಹೊಂದುತ್ತದೆ. ಆದ್ದರಿಂದ ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಶೇಪ್ ಮಾಡಿಸಿಕೊಳ್ಳಿ. ಕಾಜೋಲ್‍ಗೆ ಕೂಡಿದ ಹುಬ್ಬು ಚೆಂದ ಕಂಡಂತೆ ಎಲ್ಲರಿಗೂ ಅದು ಸೂಟ್ ಆಗುವುದಿಲ್ಲ. ಅಲ್ಲದೆ ನಿಮ್ಮ ಹುಬ್ಬಿನ ಕೂದಲು ತೆಳುವಾಗಿದೆಯೂ ಅಥವಾ ಒತ್ತಾಗಿ ಬೆಳೆದಿದೆಯೂ ಎಂಬುದರ ಮೇಲೆ ಐಬ್ರೋ ಆಕಾರ ಭಿನ್ನವಾಗುತ್ತದೆ.
5. ಹುಬ್ಬಿಗೆ ಕತ್ತರಿ ಹಾಕಬೇಡಿ:
ಪಾರ್ಲರ್‍ಗೆ ಹೋಗೋಕೆ ಟೈಂ ಇಲ್ಲ ಅಂತ ಕತ್ತರಿ ಬಳಸಿ ಹುಬ್ಬನ್ನು ತೀಡಲು ಹೋಗಬೇಡಿ. ಇದರಿಂದ ಅನಾಹುತವೇ ಹೆಚ್ಚು. ಅನಗತ್ಯ ಕೂದಲು ತೆಗೆಯೋಣವೆಂದು ಹೋಗಿ ದೊಡ್ಡ ಫಜೀತಿಗೆ ಸಿಲುಕುತ್ತೀರಿ ಹುಷಾರು. ಅಲ್ಲದೆ ಕತ್ತರಿಯಿಂದ ಕಟ್ ಮಾಡುವುದರಿಂದ ಶೇಪ್ ಕೆಟ್ಟುಹೋಗಬಹುದು. ಆಕಸ್ಮಿಕವಾಗಿ ಹುಬ್ಬಿನ ಮಧ್ಯದಲ್ಲಿ ಕೂದಲು ಕಟ್ ಮಾಡಿಬಿಟ್ಟರೆ ಅಲ್ಲಿ ಮತ್ತೆ ಕೂದಲು ಬೆಳೆಯದೇ ಹೋಗಬಹುದು. ಅದ್ದರಿಂದ ಯಾವುದೇ ಕಾರಣಕ್ಕೂ ಕತ್ತರಿಯಿಂದ ಐಬ್ರೋ ಕೂದಲು ತೆಗೆಯಲು ಪ್ರಯತ್ನಿಸಬೇಡಿ.