ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯಲಿದೆ. ಸಿದ್ದರಾಮಯ್ಯ ತಮಿಳುನಾಡಿಗೆ ನೀರನ್ನು ಹರಿಸುತ್ತೇವೆ ಎಂದು ನೇರವಾಗಿ ಕಾವೇರಿಗಾಗಿ ಕರೆದ ವಿಶೇಷ ಅಧಿವೇಶನದ ಭಾಷಣದಲ್ಲಿ ಹೇಳದೇ ಇದ್ದರೂ ಸದನ ನೀರು ಬಿಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡುವ ನಿರ್ಣಯವನ್ನು ಕೈಗೊಂಡಿದೆ.
ಸುಪ್ರೀಂ ಕೋರ್ಟ್ ಸೆ.30 ಆದೇಶದಲ್ಲಿ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕೆಂದು ಖಡಕ್ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಲಾಶಯದಲ್ಲಿ ಹೆಚ್ಚುವರಿ ನೀರು ಇರುವ ಕಾರಣ ಸರ್ಕಾರ ಬಿಡುಗಡೆ ಮಾಡಲಿದೆ. ಈ ಸಂಬಂಧ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಕಾವೇರಿ ರೈತರಿಗೆ ಸೇರಿದಂತೆ ತಮಿಳುನಾಡಿಗೆ ಸಲ್ಪ ನೀರನ್ನು ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಸಿಎಂ ಭಾಷಣದಲ್ಲಿ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಸೆ.20ರಂದು ಪ್ರತಿದಿನ 27ರವರೆಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು ಹೇಳಿ ಕಾವೇರಿ ನಿರ್ವಹಣಾ ಮಂಡಳಿ 4 ವಾರದಲ್ಲಿ ರಚಿಸಲು ಆದೇಶಿಸಿತು. ಈ ಹಿನ್ನೆಲೆಯಲ್ಲಿ ಸೆ.21ರಂದು ಸರ್ವಪಕ್ಷ ಸಭೆ ನಡೆಯಿತು. ಈ ಸಭೆಗೆ ದೇವೇಗೌಡರು ಬಂದಿದ್ದರು. ಎಲ್ಲರ ಸಲಹೆಯೂ ನೀರಿಲ್ಲ, ನೀರು ಬಿಡಕ್ಕಾಗಲ್ಲ ಎಂದಾಗಿತ್ತು. ಸಚಿವ ಸಂಪುಟ ಸಭೆಯೂ ನಡೆಸಿ 23ಕ್ಕೆ ಸದನ ಕರೆಯಲು ತೀರ್ಮಾನವಾಯಿತು. ಸದನದಲ್ಲಿ ಅನಿವಾರ್ಯವಾಗಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎನ್ನುವ ನಿರ್ಣಯ ತೆಗೆದುಕೊಳ್ಳಲಾಯಿತು.
ಕೋರ್ಟ್ ಜೊತೆ ನಮಗೆ ಸಂಘರ್ಷದ ಉದ್ದೇಶವೂ ಇಲ್ಲ. ಯಾವತ್ತೂ ನಾವು ಹಾಗೆ ಮಾಡಿಯೇ ಇಲ್ಲ. ನಾವು ಎಲ್ಲಾ ಕಾಲದಲ್ಲೂ ನೀರು ಬಿಟ್ಟಿದ್ದೇವೆ. ಕಾವೇರಿ ನ್ಯಾಯಾಧೀಕರಣ ಸಾಮಾನ್ಯ ಸಾಮಾನ್ಯ ವರ್ಷಗಳಲ್ಲಿ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಹೇಳಿದೆ. ಈ ಕಾರಣಕ್ಕಾಗಿ 2005-06ರಲ್ಲಿ 383 ಟಿಎಂಸಿ, 2006-07 258 ಟಿಎಂಸಿ ನೀರು, 2007-08 ರಲ್ಲಿ 253 ಟಿಎಂಸಿ, 2007-09 ರಲ್ಲಿ 210 ಟಿಎಂಸಿ, 2009-10ರಲ್ಲಿ 222 ಟಿಎಂಸಿ ನೀರು, 2010-11ರಲ್ಲಿ 211 ಟಿಎಂಸಿ, 2011-12 240 ಟಿಎಂಸಿ, 2012- 13 ರಲ್ಲಿ 100 ಟಿಎಂಸಿ, 2013-14ರಲ್ಲಿ 259 ಟಿಎಂಸಿ, 2014-15ರಲ್ಲಿ 229 ಟಿಎಂಸಿ, 2015-16ರಲ್ಲಿ 152 ಟಿಎಂಸಿ ನೀರನ್ನು ಹರಿಸಿದ್ದೇವೆ. 2016ರಿಂದ ಈ ವರ್ಷ ಇದುವರೆಗೆ 53.2 ಟಿಎಂಸಿ ನೀರನ್ನು ಬಿಟ್ಟಿದ್ದೇವೆ.
ನಮ್ಮ ಜಲಾಶಯದಲ್ಲಿ ಕುಡಿಯಲು ಮಾತ್ರ ನೀರು ಇರುವಾಗ ಮೂರು ವರ್ಷ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದೇವೆ. ಉಳಿದ ಎಲ್ಲಾ ವರ್ಷಗಳಲ್ಲೂ ಒಟ್ಟು 1,400 ಟಿಎಂಸಿ ನೀರು ಹೆಚ್ಚು ತಮಿಳುನಾಡಿಗೆ ಹೋಗಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಕೋರ್ಟ್ ಆದೇಶ ಪಾಲಿಸಿದ್ದೇವೆ.
ಜಗತ್ತಿನಲ್ಲಿ ಎಲ್ಲೂ ಆಗದ ಪ್ರಹಾರ ನಮ್ಮ ಮೇಲೆ ನಡೆದಿದೆ. ಬಂಗಾರಪ್ಪನವರು ಇದ್ದ ವೇಳೆ 205 ಟಿಎಂಸಿ ನೀರು ಬಿಡಲು ಹೇಳಿದರು. ಬಂಗಾರಪ್ಪ ಸುಗ್ರೀವಾಜ್ಞೆ ಹೊರಡಿಸಿದ್ದರು. ಆದರೂ ತಮಿಳುನಾಡಿಗೆ ನೀರು ಹೋಯಿತು. ಬಂಗಾರಪ್ಪ, ಮೊಯ್ಲಿ, ದೇವೇಗೌಡ, ಎಸ್‍ಎಂ ಕೃಷ್ಣ. ಜಗದೀಶ್ ಶೆಟ್ಟರ್ ಕಾಲದಲ್ಲಿ ನೀರು ಬಿಡಲಾಗಿದೆ. ನಾವೂ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ.
ಕುಡಿಯುವ ನೀರು ಮೂಲಭೂತ ಹಕ್ಕು ಆಗಿದ್ದು, ಜಲನೀತಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ನಮ್ಮ ಜವಾಬ್ದಾರಿಯಿಂದ ನಿರ್ವಹಿಸಿದ್ದೇವೆ. ಕುಡಿಯುವ ನೀರೇ ನಮ್ಮ ಮೊದಲ ಆದ್ಯತೆ. ಕುಡಿಯುವ ನೀರಿನ ಬಳಿಕ ನೀರಾವರಿ, ಕೈಗಾರಿಕೆಗೆ ಕೊಡಬೇಕು ಎಂದಿದೆ. ಹಾಗಾಗಿಯೇ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು. ಈ ನಿರ್ಣಯಕ್ಕೆ ಅಂದು ಒಕ್ಕೊರಲಿನಿಂದ ಇಡೀ ಸದನ ಒಪ್ಪಿಗೆ ನೀಡಿತು..
ಬದುಕಿ ಬದುಕಲು ಬಿಡಿ ಎಂದು ನ್ಯಾಯಾಧೀಶರು ಹೇಳುತ್ತಾರೆ. ಆದರೆ ನೀರು ಬಿಡಿ ಎಂಬ ಸೂಚನೆಯನ್ನು ಅವರು ಕೊಡುತ್ತಾರೆ. ಸೆ.5ರಂದು ನಾರಿಮನ್ ಅವರು ನ್ಯಾಯಾಲಯದ ಭಾವನೆ ಅರ್ಥ ಮಾಡಿಕೊಂಡು 10 ಸಾವಿರ ಕ್ಯೂಸೆಕ್ ನೀರು 6 ದಿನಗಳ ಕಾಲ ಬಿಡುತ್ತೇವೆ ಎಂದು ಹೇಳಿದರು. ಆದರೆ ಸುಪ್ರೀಂ ಕೋರ್ಟ್ 10 ದಿನ 15 ಸಾವಿರ ಕ್ಯೂಸೆಕ್ ನೀರು ಕೊಡಬೇಕು ಎಂದು ಹೇಳಿತು. ಅಷ್ಟೇ ಅಲ್ಲದೇ ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಅರ್ಜಿ ಹಾಕಲು ತಮಿಳುನಾಡಿಗೆ ಹೇಳಿದರೆ, ತಕರಾರು ಅರ್ಜಿ ಹಾಕಲು ನಮಗೆ ನ್ಯಾಯಾಧೀಶರು ಹೇಳಿದರು. ಸೆ. 19ರಂದು 3 ಸಾವಿರ ಕ್ಯೂಸೆಕ್ ನಂತೆ 10 ದಿನ ಬಿಡಿ ಎಂದು ಮೇಲುಸ್ತುವಾರಿ ಸಮಿತಿ ಹೇಳಿದರೆ ಸೆ.20ರಂದು ಕೋರ್ಟ್ 6 ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ಹೇಳಿತು.
ಈ ಆದೇಶ ಬರುವವರೆಗೂ ನಾವು ತಮಿಳುನಾಡುಗೆ ನೀರನ್ನು ಬಿಟ್ಟಿದ್ದೇವೆ. ದೇವೇಗೌಡರೇ ನೀರು ಬಿಡಲು ಹೇಳಿದ್ದರು. ಸಿದ್ದರಾಮಯ್ಯ ನೀರು ಬಿಡಬೇಕಾಗುತ್ತದೆ. ಈಗ ಹಠ ಮಾಡಲು ಆಗುವುದಿಲ್ಲ. ಅ.18ರಂದು ಮುಖ್ಯ ಅರ್ಜಿ ವಿಚಾರಣೆಗೆ ಬರುತ್ತದೆ. ಅದು ನಮಗೆ ಬಹಳ ಮುಖ್ಯ ಎಂದರು. ಜನ ನನಗೆ ಬೈಕೊಂಡರೂ ಪರವಾಗಿಲ್ಲ ಎಂದು ನನಗೆ ಹೇಳಿದರು. ಆದರೆ ಸೆ.20ರ ಆದೇಶದ ಬಳಿಕ ನೀರು ಬಿಡಬೇಡಿ ಎಂದು ಹೇಳಿದರು
ನಮ್ಮಲ್ಲಿ 18.85 ಲಕ್ಷ ಎಕರೆ ಬೆಳೆ ಮಾಡಲು ಅವಕಾಶ ಕೊಟ್ಟಿದ್ದಾರೆ. 6.15 ಲಕ್ಷ ಎಕರೆಯಲ್ಲಿ ಮಾತ್ರ ಬಿತ್ತನೆ ಮಾಡಿದ್ದೇವೆ. ಈ ಮೊದಲೇ ನಾವು ಬೆಳೆ ಹಾಕಬೇಡಿ ಎಂದು ಮನವಿ ಮಾಡಿದ್ದೆವು. ಆದರೆ ಅನೇಕ ರೈತರು ಬೆಳೆ ಹಾಕಲಿಲ್ಲ. ಹೇಮಾವತಿ ಬಲದಂಡೆ 1,88,000 ಎಕರೆಯಲ್ಲಿ ಬಿತ್ತನೆ ಮಾಡಿದರೂ ನೀರು ಕೊಡಲು ಆಗಲಿಲ್ಲ. ಬೆಳೆ ಒಣಗಿ ಹೋಯಿತು. ರೈತರು ತ್ಯಾಗ ಮಾಡಿದ್ದು 4,26,000 ಎಕರೆ ಬೆಳೆ ಉಳಿದಿದೆ.
ಸೆ.17ರಂದು ಕೊನೆಯ ಬಾರಿಗೆ ನೀರು ಕೊಟ್ಟಿದ್ದೇವೆ. ಒಂದು ವೇಳೆ ಮಳೆ ಬರದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ. ಇಂದು ನಮ್ಮ ಜಲಾಶಯಗಳಲ್ಲಿ 34.13 ಟಿಎಂಸಿ ನೀರಿದೆ. ಜಲಾಶಯಗಳಲ್ಲಿ ಆರೂವರೆ ಟಿಎಂಸಿ ಹೆಚ್ಚು ನೀರು ಬಂದಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಮತ್ತು ತಮಿಳುನಾಡಿಗೆ ತಿಳಿದಿದೆ.
ಸೆ.27ಕ್ಕೆ ಮತ್ತೆ ಸುಪ್ರೀಂ ಕೋರ್ಟ್ ಮತ್ತೆ ಮೂರು ದಿನ 6 ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ಹೇಳಿತ್ತು. ಈ ವೇಳೆ ವಕೀಲ ಫಾಲಿ ನಾರಿಮನ್ ನೀರು ಬಿಡುವಂತೆ ಹೇಳಿದರು. ಇದಕ್ಕೆ ನಾವು ನಮ್ಮ ಸದನದ ನಿರ್ಣಯ ಇರುವ ಕಾರಣ ಸಾಧ್ಯವಿಲ್ಲ ಎಂದು ಹೇಳಿದೆ. ಈ ಕಾರಣಕ್ಕಾಗಿ ಸೆ.20ರಿಂದ ಇಂದಿನವರೆಗೆ ನೀರು ಬಿಟ್ಟಿಲ್ಲ. ಕುಡಿಯುವ ನೀರು ಬಿಟ್ಟು ಬೇರೆ ಯಾವ ಉದ್ದೇಶಕ್ಕೂ ನೀರು ಬಿಟ್ಟಿರಲಿಲ್ಲ. ಸರ್ಕಾರ ನೂರಕ್ಕೆ ನೂರು ಸದನದ ನಿರ್ಣಯಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆವು. ಆರೂವರೆ ಟಿಎಂಸಿ ಹೆಚ್ಚು ಬರುತ್ತಿರುವುದರಿಂದ ಬೆಳೆಗಾಗಿ ನೀರು ಬಿಡಿ ಎಂದು ನಾರಿಮನ್ ಹೇಳಿದರು.
ಸೆ.29ರಂದು ಉಮಾಭಾರತಿಯವರು ಸಭೆ ಕರೆದರು. ಈ ಸಭೆಯಲ್ಲಿ ನಮ್ಮ ಮುಖ್ಯ ಕಾರ್ಯದರ್ಶಿ, ಕಾನೂನು ಸಚಿವರು, ಎಂಜಿನಿಯರ್ ಭಾಗವಹಿಸಿದ್ದರು. ತಮಿಳುನಾಡಿನಿಂದ ಲೋಕೋಪಯೋಗಿ ಸಚಿವರು ಬಂದಿದ್ದರು. ಈ ವೇಳೆ ನಾನು ಲಿಖಿತ ಉತ್ತರದಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ಬರೆದಿದ್ದೆ.
ಸೆ.30ರಂದು ವಿಚಾರಣೆ ನಡೆಯಲಿರುವ ಕಾರಣ ಫಾಲಿ ನಾರಿಮನ್ ಅವರಿಗೆ ಸದನದ ನಿರ್ಣಯದ ಬಗ್ಗೆ ನಾನು ಪತ್ರ ಬರೆದು, ಈ ಪತ್ರವನ್ನು ಕೋರ್ಟ್ ಗಮನಕ್ಕೆ ತನ್ನಿ ಎಂದು ಹೇಳಿದ್ದೆ. ನನ್ನ ಪತ್ರವೇ ನಮ್ಮ ವಾದ ಎಂದು ಪತ್ರ ಕೊಟ್ಟರು. ಈ ವೇಳೆ ನೀರು ಬಿಡ್ಲಿಲ್ಲ ಎಂದು ವಾದ ಮಂಡಿಸೋದು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ನನಗೆ ಪರ್ಸನಲ್ ಎಥಿಕ್ಸ್ ಮುಖ್ಯ ಎಂದು ಹೇಳಿದರು.
ನಾರಿಮನ್ 32 ವರ್ಷದಿಂದ ಕರ್ನಾಟಕದ ವಕೀಲರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅವರದೇ ಆದ ಘನತೆಯಿದೆ. ನಾವು ಬಂದ್ಮೇಲೆ ನಾರಿಮನ್ ವಕೀಲರಾಗಿಲ್ಲ. ಎಲ್ಲರ ಅವಧಿಯಲ್ಲೂ ಅವರೇ ವಕೀಲರಾಗಿದ್ದಾರೆ. ಅಕ್ಟೋಬರ್ 18ರಂದು ನಾರಿಮನ್ ಅವರು ಇರಲೇಬೇಕು ಎಂದು ಭಾವಿಸುತ್ತೇನೆ ಮತ್ತು ಅವರು ಇರಬೇಕಾಗುತ್ತದೆ. ಕಾವೇರಿ ನೀರಿನ ಹಂಚಿಕೆ ಬಗ್ಗೆ ಅವರಿಗೆ ಜ್ಞಾನವಿದೆ.
ಎಂಥದೇ ಕಷ್ಟ ಬಂದ್ರೂ ಇವತ್ತಿನಿಂದ ಕುಡಿಯಲು 23.3ಟಿಎಂಸಿ ನೀರು ಬೇಕು. ಈ ನೀರಿಗೆ ಯಾವ ಕಾರಣಕ್ಕೂ ರಾಜಿಯಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ನಿರ್ಣಯ ಮಂಡಿಸಿದ್ದೇವೆ. ತುಮಕೂರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಕುಡಿಯುವ ನೀರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ಬೆಳೆಗೆ 43 ಟಿಎಂಸಿ ನೀರು ಬೇಕಾಗುತ್ತದೆ. ಮುಂದಿನ ಡಿಸೆಂಬರ್‍ವರೆಗೆ 29.29 ಟಿಎಂಸಿ ನೀರು ಬರಬಹುದು ಎಂಬ ಅಂದಾಜಿದೆ.
ದೇವೇಗೌಡರು, ಕುಮಾರಸ್ವಾಮಿ, ಶೆಟ್ಟರ್ ಅವರು ಅಕ್ಟೋಬರ್ 18 ನಮಗೆ ಮುಖ್ಯ ಎಂದು ಹೇಳಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ನಮಗೆ ನಿರ್ಣಯಕ್ಕೆ ಅವಕಾಶ ಕೊಡಿ. ದೇವೇಗೌಡರು ಕೇರಳದ ಸಚಿವರ ಜೊತೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡರು ಸಹಕರಿಸಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ.
ದೇವೇಗೌಡರು ನಿರಂತರವಾಗಿ ಪ್ರಧಾನಿಗಳ ಸಂಪರ್ಕದಲ್ಲಿದ್ದರು. ಈ ವಯಸ್ಸಿನಲ್ಲಿ ಉಪವಾಸ ಬೇಡ ಎಂದು ಹೇಳಿದಾಗ ಇದನ್ನೆಲ್ಲಾ ನೋಡ್ಕೊಂಡು ನಾನು ಹೇಗಪ್ಪಾ ಸುಮ್ಮನಿರ್ಲಿ ಎಂದು ದೇವೇಗೌಡರು ಹೇಳಿದರು.
ಕರ್ನಾಟಕದಲ್ಲಿ ಒಂದು ಸಂಪ್ರದಾಯವಿದ್ದು, ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಜನರಿಗೆ ನಂಬಿಕೆ ದ್ರೋಹ ಮಾಡುವುದಿಲ್ಲ. ನಾನು ಜನರ ಜೊತೆ ಇರುತ್ತೇವೆ ಎಂದು ಹೇಳಿದ್ದೇವೆ. ಇಂದು ಕೂಡಾ ನಾವು ಜನರಿಗೆ ತಲೆ ಬಾಗಬೇಕಾಗುತ್ತದೆ. ಜನಗಳ ಭಾವನೆಗಳಿಗೆ ಬೆಲೆ ಕೊಡುತ್ತೇನೆ. ಬೆಳೆ ಪರಿಹಾರ ಕೊಡಲು ಮನವಿ ಮಾಡಿದ್ದು ಎಲ್ಲದರ ಬಗ್ಗೆ ಸರ್ವೆ ಮಾಡುತ್ತೇನೆ
ಮಹದಾಯಿ ಬಗ್ಗೆಯೂ ತುರ್ತು ಅಧಿವೇಶನ ಕರೆಯಿರಿ ಎನ್ನುವ ಸಲಹೆ ಬಂದಿದೆ. ಆ ಭಾಗ, ಈ ಭಾಗ ಬೇಡ, ಅಖಂಡ ಕರ್ನಾಟಕ, ಅಖಂಡ ಕನ್ನಡಿಗರು, ಉತ್ತರ, ದಕ್ಷಿಣ, ಕರಾವಳಿಯವರೇ ಇರಬಹುದು. ಇದು ರೈತರ ಸರ್ಕಾರ. ಕಾವೇರಿ, ಕೃಷ್ಣೆ ನಮಗೆ ಎರಡು ಕಣ್ಣುಗಳಿದ್ದಂತೆ. ಯಾವುದೇ ಒಂದು ಪ್ರದೇಶದ ಬಗ್ಗೆ ಮಾತನಾಡುವುದಿಲ್ಲ.