ರಾಯಚೂರು: ಪ್ರತಿಯೊಬ್ಬರಿಗೂ ಒಂದಿಲ್ಲೊಂದು ನ್ಯೂನತೆ, ಸಮಸ್ಯೆ ಇದ್ದೇ ಇರುತ್ತೆ. ಅದನ್ನೆಲ್ಲಾ ಮೆಟ್ಟಿನಿಂತರೇನೇ ತಲೆಎತ್ತಿ ಬದುಕಲು ಸಾಧ್ಯ. ರಾಯಚೂರಿನ ಈ ಹುಡುಗಿ ತನ್ನ ಸಮಸ್ಯೆಗಳನ್ನೇ ತಾನು ಮರೆತು ಇನ್ನೊಬ್ಬರಿಗೆ ದಾರಿದೀಪವಾಗಲು ಹೊರಟಿದ್ದಾಳೆ. ತನ್ನ ಬದುಕನ್ನ ತಾನೇ ಕಟ್ಟಿಕೊಳ್ಳಲು ಹವಣಿಸುತ್ತಿದ್ದಾಳೆ. ಆದ್ರೆ ಬಡತನ ಅನ್ನೋದು ಬೆಳವಣಿಗೆಗೆ ಅಡ್ಡಿಯಾಗಿದೆ.
ಲಿಂಗಸುಗೂರು ತಾಲೂಕಿನ ತೊಂಡಿಹಾಳ ಗ್ರಾಮದ ಲಲಿತಾ ಹುಟ್ಟುತ್ತಲೇ ಕಿವುಡು ಹಾಗೂ ಮೂಕತನದ ಶಾಪವನ್ನ ಹೊತ್ತುಕೊಂಡು ಬಂದಿದ್ದಾಳೆ. ಆದರೆ ತನ್ನ ಧೈರ್ಯ ಸ್ವಾಭಿಮಾನದಿಂದ ಯಾರಿಗೂ ಕಮ್ಮಿ ಇಲ್ಲದಂತೆ ಬದುಕುತ್ತಿದ್ದಾಳೆ.
ಮೂಕ ಮತ್ತು ಶ್ರವಣ ದೋಷ ಮಕ್ಕಳ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವರೆಗೆ ಓದಿದ್ದಾಳೆ. ಅಲ್ಲದೆ ಕಂಪ್ಯೂಟರ್ ತರಬೇತಿಯನ್ನ ಪಡೆದಿದ್ದಾಳೆ. ಟ್ಯಾಲಿ, ಡಿಟಿಪಿ, ಕಂಪ್ಯೂಟರ್ ಬೇಸಿಕ್ ಕಲಿತಿರುವ ಲಲಿತಾ ಗ್ರಾಮದ ಮಕ್ಕಳಿಗೆ ಕಂಪ್ಯೂಟರ್ ಕಲಿಸಬೇಕು ಎನ್ನುವ ಯೋಚನೆಯಲ್ಲಿದ್ದಾಳೆ. ಆದ್ರೆ ಕಂಪ್ಯೂಟರ್ ಕೊಳ್ಳಲು ಮನೆಯಲ್ಲಿನ ಬಡತನ ಅಡ್ಡಿಯಾಗಿದೆ. ಇತರರಿಗೆ ಪಾಠ ಹೇಳಿ ತನ್ನ ಬದುಕನ್ನ ರೂಪಿಸಿಕೊಳ್ಳುವುದರ ಜೊತೆಗೆ ಗ್ರಾಮದ ಮಕ್ಕಳ ಭವಿಷ್ಯಕ್ಕೂ ಸಹಕಾರಿಯಾಗಬೇಕು ಅನ್ನೋದು ಲಲಿತಾಳ ಉದ್ದೇಶ.
ಲಲಿತಾಳಿಗೆ ಮುಂದೆ ಓದಬೇಕು ಅನ್ನೋ ಆಸೆ ಬೆಟ್ಟದಷ್ಟಿದ್ದರೂ ಮನೆಯಲ್ಲಿನ ಬಡತನದಿಂದಾಗಿ ಓದು ಮೊಟುಕುಗೊಳಿಸಿದ್ದಾಳೆ. ಪೋಷಕರಿಗೂ ಓದಿಸುವಷ್ಟು ಶಕ್ತಿಯಿಲ್ಲ, ಅಲ್ಲದೆ ಬೆಳೆದ ಮಗಳನ್ನ ದೂರದ ಊರಲ್ಲಿ ಬಿಡುವ ಧೈರ್ಯವೂ ಇಲ್ಲ. ಮೂರು ಎಕರೆ ಬಯಲು ಭೂಮಿಯಿದ್ದರೂ ಅವಿಭಕ್ತ ಕುಟುಂಬವಾಗಿರುವುದರಿಂದ ಬೆಳೆದದ್ದೆಲ್ಲಾ ಹೊಟ್ಟೆಬಟ್ಟೆಗೆ ಅನ್ನೋ ಪರಸ್ಥಿತಿಯಿದೆ. ಹೀಗಾಗಿ ಪೋಷಕರಿಗೆ ಹೊರೆಯಾಗಬಾರದು ಅಂತ ಲಲಿತಾ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು ನಿರ್ಧರಿಸಿದ್ದಾಳೆ.
ತನ್ನ ನ್ಯೂನತೆಯನ್ನ ಎಲ್ಲಿಯೂ ತೋರಿಸಿಕೊಳ್ಳದೆ ಜಾಣತನದಿಂದ ಕೆಲಸ ಮಾಡಿಕೊಂಡು ಹೋಗುವ ಲಲಿತಾ ಚಿತ್ರಕಲೆ ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನ ಗೆದ್ದಿದ್ದಾಳೆ. ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ತನ್ನ ಮಾದರಿ ಪ್ರಯೋಗಕ್ಕೆ ಇನ್ಸ್ ಪೈರ್ ಪ್ರಶಸ್ತಿ ಪಡೆದಿದ್ದಾಳೆ. ಈಗ ಪುಟ್ಟ ಕಂಪ್ಯೂಟರ್ ತರಬೇತಿ ಕೇಂದ್ರ ತೆರೆಯಲು ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಅಂಗವೈಕಲ್ಯವನ್ನು ಮೆಟ್ಟಿ ದಿಟ್ಟತನದ ಹೆಜ್ಜೆ ಇಡಲು ಮುಂದಾಗಿರುವ ಲಲಿತಾಳಿಗೆ ಸಹಾಯ ಹಸ್ತಗಳ ಅವಶ್ಯಕತೆಯಿದೆ.