ಧಾರವಾಡ: ನಗರದ ಹೊರವಲಯದಲ್ಲಿರುವ ಗೌಡರ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಮನೆಗಳಿವೆ. ಆದ್ರೆ ಮನೆ ಮಾಲೀಕರಿಗೆ ಓಡಾಡಲು ಸರಿಯಾದ ರಸ್ತೆನೇ ಇಲ್ಲ. ಮಳೆ ಬಂದ್ರೆ ಫಜೀತಿ ಹೇಳತೀರದು.
ವಾರ್ಡ್ ನಂಬರ್ 1ರಲ್ಲಿ ಬರುವ ಈ ಕಾಲೋನಿಯಲ್ಲಿ ಜನರು ಕಳೆದ 10 ವರ್ಷಗಳಿಂದ ಇದೇ ರೀತಿ ವಾಸಿಸುತ್ತಿದ್ದಾರೆ. ಚರಂಡಿ ಮೇಲೆ ಎರಡು ಪರ್ಶಿ ಕಲ್ಲನ್ನ ಇಟ್ಟು ಅದರ ಮೇಲೆ ನಡೆದಾಡುತ್ತಾರೆ. ಮಳೆಗಾಲದಲ್ಲಿ ಇಲ್ಲಿನ ಜನ್ರು ರಸ್ತೆಯಲ್ಲಿ ಹೋಗುವ ವೇಳೆ ಬಿದ್ದು ಕೈ ಕಾಲು ಕೂಡಾ ಮುರಿದುಕೊಂಡಿರುವ ಉದಾಹರಣೆಯೂ ಇದೆ.
ಇನ್ನೊಂದು ಕಡೆ ಮಳೆಗಾಲದಲ್ಲಿ ನೀರು ಹೋಗೋಕೆ ಸರಿಯದ ಚರಂಡಿ ವ್ಯವಸ್ಥೆ ಇಲ್ಲದೆ ಕಾಲೋನಿಯಲ್ಲಿ ನೀರು ತುಂಬುತ್ತದೆ. ಈ ಬಗ್ಗೆ ಹೋರಾಟ ನಡೆಸಿದ್ದಕ್ಕೆ ಕಾಲೋನಿಯ 5 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಮಳೆಗಾಲದಲ್ಲಿ ಹಾವು, ಚೇಳುಗಳು ಮನೆಗೆ ನುಗ್ಗುತ್ತವೆ. ಹೀಗಾಗಿ ಚರಂಡಿ ಮೇಲೆ ಎರಡು ಕಡೆ ಸೇತುವೆ ನಿರ್ಮಿಸಿಕೊಡಿ ಎಂದು ಇಲ್ಲಿನ ಜನರು ಜನಪ್ರತಿನಿಧಿಗಳ ಬಳಿ ಬೇಡಿಕೊಂಡರೂ ಇದುವರೆಗೂ ಸ್ಪಂದಿಸಿಲ್ಲ.
ಜನಪ್ರತಿನಿಧಿಗಳಿರೋದು ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸೋಕೆ. ಆದ್ರೆ ಜನರಿಂದ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಕರ್ತವ್ಯವವನ್ನ ಇವರು ಮರೆತುಬಿಡ್ತಾರೆ. ಬೇರೆ ದಾರಿ ಕಾಣದೆ ಕಾಲೋನಿ ಮಂದಿ ಬೆಳಕು ಕಾರ್ಯಕ್ರಮಕ್ಕೆ ಬಂದು ಸಮಸ್ಯೆಗೆ ಪರಿಹಾರ ಕೊಡಿಸಿ ಅಂತ ಕೇಳಿಕೊಂಡಿದ್ದಾರೆ. ಹೀಗಾಗಿ ಗೌಡರ ಕಾಲೋನಿ ಜನರ ರಸ್ತೆ ಸಮಸ್ಯೆಗೆ ನೆರವಾಗೋ ಪ್ರಯತ್ನ ನಮ್ಮದು.