ಉಡುಪಿ: ಯಾವುದಾದರೂ ದೊಡ್ಡ ಅನಾಹುತವಾಗೋದು ತಪ್ಪಿದ್ರೆ ಅದೃಷ್ಟ ಚೆನ್ನಾಗಿತ್ತು, ಆಯುಷ್ಯ ಗಟ್ಟಿಯಿತ್ತು ಅಂತ ಹೇಳ್ತಾರೆ. ಉಡುಪಿಯಲ್ಲಿ ನಡೆದ ಒಂದು ಅಪಘಾತ ಪ್ರಕರಣ ಇದಕ್ಕೆ ಸೂಕ್ತ ಉದಾಹರಣೆ.
ಕೊಡವೂರಿನ ಅನಿತಾ ಸುವರ್ಣ ಹೊಸದೊಂದು ಕಾರ್ ಖರೀದಿಸಿದ್ದರು. ಚಾಲಕನೊಂದಿಗೆ ಡ್ರೈವಿಂಗ್ ಕಲಿಯೋದಕ್ಕೆ ಅಂತ ಡ್ರೈವಿಂಗ್ ಸ್ಕೂಲಿಗೆ ಬಂದು, ರಸ್ತೆ ಪಕ್ಕ ಕಾರು ನಿಲ್ಲಿಸಿ ಕಚೇರಿಗೆ ತೆರಳಿದ್ದರು. ಬಿಸಿಲಿನಿಂದ ಬೇಸತ್ತ ಚಾಲಕ ಕಾರಿನಿಂದ ಇಳಿದು ಕಚೇರಿಯೊಳಗೆ ಹೋಗಿ ಕುಳಿತಿದ್ದ. ಈ ಸಂದರ್ಭ ಮಣಿಪಾಲ – ಉಡುಪಿ ರಸ್ತೆಯಲ್ಲಿ ಹನುಮಾನ್ ಎಂಬ ಖಾಸಗಿ ಕಂಪನಿಯ ಬಸ್ ಬಂದಿದೆ. ಏಕಾಎಕಿ ಬಸ್ಸಿಗೆ ಅಡ್ಡ ಬಂದ ಬೈಕನ್ನು ತಪ್ಪಿಸಲು ಬಸ್ ಚಾಲಕ ಬ್ರೇಕ್ ಹೊಡೆದಿದ್ದಾನೆ. ಬಸ್ ಪಲ್ಟಿಯಾಗಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಘಟನೆ ನಡೆಯುವ ಕೆಲವೇ ಕ್ಷಣಗಳ ಹಿಂದೆ ಕಾರಿನಿಂದ ಇಬ್ಬರೂ ಇಳಿದಿದ್ದರು. ಇಲ್ಲದಿದ್ದರೆ ದೊಡ್ಡದೊಂದು ಅನಾಹುತ ಸಂಭವಿಸುತ್ತಿತ್ತು.
ಘಟನೆಯಲ್ಲಿ ಮಗುಚಿಬಿದ್ದ ಬಸ್ಸಿನಲ್ಲಿದ್ದ 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇಷ್ಟೆಲ್ಲಾ ಆಗುವ ವೇಳೆಗೆ ಕಾರು ಮಾಲಕಿ ಅನಿತಾ ಸುವರ್ಣ ಓಡೋಡಿ ಬಂದಿದ್ದಾರೆ. ನಜ್ಜುಗುಜ್ಜಾದ ಕಾರನ್ನು ಕಂಡ ಅವರು ಸಂಭಾವ್ಯ ಅಪಘಾತವನ್ನು ನೆನೆದು ತಲೆ ತಿರುಗಿ ಬಿದ್ದಿದ್ದಾರೆ. ಕಾರು ಮಾಲಕಿ ಸೇರಿದಂತೆ ಎಲ್ಲಾ ಗಾಯಾಳುಗಳನ್ನು ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಿಂದಾಗಿ ಉಡುಪಿ ಮಣಿಪಾಲ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ಸಂಚಾರ ಸುಗಮಗೊಳಿಸಲು ಸಿಕ್ಕಾಪಟ್ಟೆ ಶ್ರಮಿಸಿದರು.