ವಿಧಾನಸಭೆ: ಕೇಂದ್ರ ಸರ್ಕಾರದ ಜಲನೀತಿ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದಿದೆ. ಬೆಂಗಳೂರು ಹಾಗೂ ಕಾವೇರಿ ಕೊಳ್ಳದ ಪ್ರದೇಶದಲ್ಲಿರುವ ಜನರಿಗೆ ಕುಡಿಯುವ ನೀರಿಗಾಗಿ 27 ಟಿಎಂಸಿ ನೀರಿನ ಅಗತ್ಯವಿದೆ. ಜನರಿಗೆ ಕುಡಿಯುವ ನೀರು ಕೊಟ್ಟು ನಾವು ನಮ್ಮ ರೈತರ ಹಿತ ಕಾಪಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಕಾವೇರಿ ಪ್ರಕರಣದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಸಿಎಂ ಎಲ್ಲಿಯೂ ನಾವು ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಹೇಳಲಿಲ್ಲ. ನಾವಿವತ್ತು ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಕಳೆದ ಬಾರಿಯೂ ಮಳೆ ಕೊರತೆಯಿಂದ ಬೆಳೆ ನಷ್ಟವಾಯಿತು ಎಂದು ಹೇಳಿದರು. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಏನು ಹೇಳಿದರು ಅಂತಾ ಅವರ ಮಾತಿನಲ್ಲೇ ಕೇಳಿ.
ಕಾವೇರಿಗಾಗಿ ಸಿಎಂ ವಿಧಾನಸಭೆಯಲ್ಲಿ ಹೇಳಿದ್ದೇನು?
ವಿಶೇಷ ಸನ್ನಿವೇಶದಲ್ಲಿ ತುರ್ತು ಸಭೆ ಕರೆಯಲಾಗಿದೆ. ಆದರೆ ತುರ್ತು ಸಭೆ ಕರೆದಿರೋದು ಇದೇ ಮೊದಲೇನಲ್ಲ. ಈ ಹಿಂದೆ 5 ಬಾರಿ ಕಾವೇರಿ ವಿಚಾರವಾಗಿ ಕರೆಯಲಾಗಿದೆ ಎಂದರು. 6-7-1991 ರಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ, 1991 ರಲ್ಲಿ ಮಧ್ಯಂತರ ಆದೇಶ ಬಂತು, ಆಗ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. 1995 ರಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ. 2002ರಲ್ಲಿ ತುರ್ತು ಸಭೆ ನಡೆದರೂ ನಿರ್ಣಯ ಅಂಗೀಕಾರ ಆಗಿಲ್ಲ. 2007 ರಲ್ಲಿ ಅಂತಿಮ ಆದೇಶ ಬಂದ ತುರ್ತು ಅಧಿವೇಶನ ಬಂತು. ಹೀಗೆ ಒಟ್ಟು 5 ಬಾರಿ ಕಾವೇರಿ ವಿಚಾರವಾಗಿ ಅಧಿವೇಶನ ಕರೆಯಲಾಗಿದೆ.
ಇದು ನನ್ನ 2ನೇ ಸಂಕಷ್ಟ: ವಿಧಾನ ಪರಿಷತ್‍ನಲ್ಲಿ ಈಗಾಗಲೇ ನಿರ್ಣಯ ಅಂಗೀಕಾರವಾಗಿದೆ. ಹೀಗಾಗಿ ವಿಧಾನಸಭೆಯಲ್ಲಿ ಹೆಚ್ಚು ಚರ್ಚೆ ಬೇಡ. ಇವತ್ತು ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಸತತವಾಗಿ 2 ನೇ ಬಾರಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕಳೆದ ಬಾರಿಯೂ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ. 146 ತಾಲೂಕುಗಳನ್ನ ಬರಪೀಡಿತ ತಾಲೂಕು ಅಂತಾ ಘೋಷಣೆ ಮಾಡಿದ್ದೆವು. ಕಳೆದ ಬಾರಿಗಿಂತ ಈ ಬಾರಿ ಮಳೆ ಕೊರತೆಯಾಗಿದೆ. ಹಾಗಾಗಿ ರಾಜ್ಯದಲ್ಲಿ ಕೆಟ್ಟ ಸನ್ನಿವೇಶ ನಿರ್ಮಾಣವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಅನಿವಾರ್ಯವಾಗಿ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸದನ ಸೇರಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 4 ಜಲಾಶಯಗಳಿದ್ದು, ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸ್ಥಿತಿ ದುಸ್ತರವಾಗಿದೆ ಎಂದರು.
ನಮಗೆ ಕುಡಿಯಲು ನೀರಿಲ್ಲ, ಅವರಿಗೆ ಸಾಂಬಾಗೆ ನೀರು ಬೇಕಂತೆ: ಒಟ್ಟು ಜಲಾಶಯಗಳಲ್ಲಿ 41 ವರ್ಷಗಳ ಸರಾಸರಿ ತೆಗೆದುಕೊಂಡರೆ 200 ಟಿಎಂಸಿ ನೀರಿರಬೇಕು. ಆದ್ರೆ ಬಂದಿರೋದು 124 ಟಿಎಂಸಿ ಮಾತ್ರ. ನಮ್ಮ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಕಬ್ಬಿನ ಬೆಳೆ ಮೊದಲೇ ಹಾಕಿದ್ದು, ಭತ್ತ ಸೇರಿ ಬೇರೆ ಬೆಳೆಗಳಿಗೆ ನೀರು ಕೊಡಲು ಆಗುತ್ತಿಲ್ಲ. ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಇರುವ ನೀರು 27.6 ಟಿಎಂಸಿ ಮಾತ್ರ. ಇಂದಿನಿಂದ ಮುಂದಿನ ಮೇ ಕೊನೆಯವರೆಗೆ ಕಾವೇರಿ ಕೊಳ್ಳದ ಪ್ರದೇಶಗಳ ಜನರಿಗೆ ಕುಡಿಯಲು ಬೇಕಾಗಿರುವುದು 24.11 ಟಿಎಂಸಿ ನೀರು. ಮನುಷ್ಯರು ಕುಡಿಯಲು ಮಾತ್ರ ನೀರು ಬೇಕಾಗಿರುವುದಲ್ಲ. ಪ್ರಾಣಿಗಳಿಗೂ ಕುಡಿಯಲು ನೀರು ಬೇಕಾಗುತ್ತದೆ. ನಮ್ಮ ರೈತರು ತ್ಯಾಗ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ತಮಿಳುನಾಡಿನಲ್ಲಿಲ್ಲ. ಮೆಟ್ಟೂರು ಡ್ಯಾಂನಲ್ಲಿ ಈಗಾಗಲೇ 52 ಟಿಎಂಸಿ ನೀರಿದೆ. ನಾವು ಇಲ್ಲಿ ಜನರಿಗೆ ನೀರು ಕೊಡಬೇಕೆಂದು ಪರದಾಡುತ್ತಿದ್ದೇವೆ. ಇದು ನಮ್ಮ ಸಂಕಷ್ಟ. ಆದರೆ ತಮಿಳುನಾಡಿನವರು ಸಾಂಬಾ ಬೆಳೆ ಬೆಳೆಯಲು ನೀರು ಕೇಳುತ್ತಿದ್ದಾರೆ.
ಸೆ.5 ರಂದು ಮೇಲುಸ್ತುವಾರಿ ಸಮಿತಿ ಮುಂದೆ ಹೋಗುವಂತೆ ಸೂಚನೆ ಕೊಟ್ಟರು. ಕಾವೇರಿ ಮೇಲುಸ್ತುವಾರಿ ಸಮಿತಿ ಎಕ್ಸ್‍ಪರ್ಟ್ ಕಮಿಟಿ ಎಂದು ಸುಪ್ರೀಂ ಕೋರ್ಟ್ ಹೇಳಿತು. ಮೂರು ದಿನದಲ್ಲಿ ಸಮಿತಿ ಮುಂದೆ ಹೋಗುವಂತೆ ಸೂಚನೆ ನೀಡಿತು. ಕಾವೇರಿ ಮೇಲುಸ್ತುವಾರಿ ಸಮಿತಿಯಲ್ಲಿ 4 ರಾಜ್ಯದ ಸಿಎಸ್, ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ತಜ್ಞರು ಇರುತ್ತಾರೆ. 2013 ರಲ್ಲಿ ಜಾರಿಗೆ ಬಂದಿತ್ತು, ಅದಕ್ಕೂ ಮೊದಲು ಪ್ರಧಾನಿ ಬಳಿ ಸಮಿತಿ ಇತ್ತು. ಸೆ.12 ಹಾಗೂ ಸೆ.19 ರಂದು ಸಮಿತಿ ಸಭೆ ನಡೆಯುತ್ತೆ. ಈ ವೇಳೆ ರಾಜ್ಯದ ಪರಿಸ್ಥಿತಿ, ಮಳೆ ಬಿದ್ದ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ನಮ್ಮಲ್ಲಿ ಸೌಥ್ ವೆಸ್ಟ್ ಮಾನ್ಸೂನ್ ಸೆಪ್ಟೆಂಬರ್‍ಗೆ ಕೊನೆಯಾಗುತ್ತದೆ. ಬಳಿಕ ನಮಗೆ ಅಷ್ಟಾಗಿ ಮಳೆ ಬೀಳುವುದಿಲ್ಲ. ಆದ್ರೆ, ತಮಿಳುನಾಡಿಗೆ ಅಕ್ಟೋಬರ್‍ನಿಂದ ಡಿಸೆಂಬರ್ ಕೊನೆಯವರೆಗೆ ನಾರ್ಥ್‍ಈಸ್ಟ್ ಮಾನ್ಸೂನ್ ಆಗುತ್ತದೆ. ಮುಂದಿನ ತಿಂಗಳು ಅವರಿಗೆ ಸಾಮಾನ್ಯ ಮಳೆಯಾಗುತ್ತದೆ.
ಕುಡಿಯುವ ನೀರು ಕೊಟ್ಟಿದ್ದೆವು: ಜಲನೀತಿ ಪ್ರಕಾರ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ರೈತರು ಅಂದ್ರೆ ಎಲ್ಲಾ ಒಂದೇ. ನಾವು ಚಿಕ್ಕವರಿದ್ದಾಗ ಮಳೆ ರೈತರ ಜೊತೆ ಜೂಜಾಟವಾಡುತ್ತಿದೆ ಅಂತಿದ್ದರು. ಅಂತಹ ಸ್ಥಿತಿಯಲ್ಲಿ ನಾವು ಸಿಕ್ಕಿ ಹಾಕಿಕೊಂಡಿದ್ದೇವೆ. 2002 ಹಾಗೂ 2012ರ ಜಲನೀತಿಯಲ್ಲಿ ಕುಡಿಯುವ ನೀರು ಮೊದಲ ಆದ್ಯತೆ ಎಂದಿದೆ. ಎರಡು ಸಾರಿಯೂ ಇದನ್ನೇ ಹೇಳಿದ್ದರು. ತೆಲುಗು ಗಂಗಾ ವಿವಾದದಲ್ಲಿ ಚೆನ್ನೈನಲ್ಲಿ 15 ಟಿಎಂಸಿ ನೀರು ಕೊಟ್ಟರು. ಕರ್ನಟಕ, ಆಂಧ್ರ, ಮಹಾರಾಷ್ಟ್ರದವರು ಸೇರಿ ಕುಡಿಯುವ ನೀರು ಕೊಡಲೇಬೇಕು ಎಂದು ಮೂರು ರಾಜ್ಯಗಳು ತಲಾ 5 ಟಿಎಂಸಿ ನೀರು ಕೊಟ್ಟೆವು.
ನಾವೆಲ್ಲಾ ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ನಮ್ಮ ರೈತರೂ ಉಳಿಯಬೇಕು. ನಮ್ಮ ಜನರಿಗೂ ನೀರು ಕೊಡಬೇಕು. ತಮಿಳುನಾಡಿನ ಜನರಿಗೂ ನೀರು ಬೇಕು. ಅವರ ರೈತರಿಗೂ ನೀರು ಬೇಕು. ಇದರಲ್ಲಿ ಯಾವುದೇ ಜಿಜ್ಞಾಸೆ ಇಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಬಗ್ಗೆಯೂ ನಮಗೆ ಗೌರವವಿದೆ. ಎಲ್ಲರೂ ಇದನ್ನು ಗೌರವಿಸಬೇಕು. ನ್ಯಾಯಾಂಗದ ಬಗ್ಗೆ ಅಪಾರವಾದ ಗೌರವವಿದ್ದು, ನ್ಯಾಯಾಲಯದ ಆದೇಶ ಧಿಕ್ಕರಿಸುವುದು ನಮ್ಮ ಉದ್ದೇಶವಲ್ಲ ಎಂದು ಹೇಳಿದರು.
ತಮಿಳುನಾಡಿನವರು ಆಗಸ್ಟ್ 19ಕ್ಕೆ ಅರ್ಜಿ ಹಾಕಿದ್ದಾರೆ. ನಮ್ಮ ಎಸ್‍ಎಲ್‍ಪಿ ಅಕ್ಟೋಬರ್ 18ರಂದು ವಿಚಾರಣೆಗೆ ಬರಲಿದೆ. ಈ ನಡುವೆ ತಮಿಳುನಾಡು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಹಾಕಿದೆ.
ಕಾವೇರಿ ವಿಚಾರ ಚರ್ಚೆಗೆಂದು 27-8-2016ರಂದು ನಾನು ಸರ್ವಪಕ್ಷ ಸಭೆ ಕರೆದಿದ್ದೆ. ತಮಿಳುನಾಡು ಅರ್ಜಿಗೆ ಸಂಬಂಧಿಸಿದಂತೆ ಚರ್ಚೆಗೆ ಸಭೆ ಕರೆದಿದ್ದೆ. ನೆಲ, ಜಲ, ಭಾಷೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಆ ಪರಂಪರೆ ಮುಂದುವರಿಯಬೇಕು, ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಬೇಕು. ನಾರಿಮನ್ ನಮ್ಮ ವಕೀಲರು. ಕಳೆದ 32 ವರ್ಷಗಳಿಂದ ಕರ್ನಾಟಕದ ಪರವಾಗಿ ನಾರಿಮನ್ ವಾದ ಮಂಡಿಸಿದ್ದಾರೆ.
ಅಂದು ‘ಬದುಕಿ, ಬದುಕಲು ಬಿಡಿ’ ಎಂದು ಸುಪ್ರೀಂ ಕೋರ್ಟ್ ಹೇಳಿತು. ನಾರಿಮನ್ ಗುಡ್‍ವಿಲ್ ಗೆಶ್ಚರ್ ಮಾಡಿ, 6 ದಿನಗಳ ಕಾಲ 10 ಸಾವಿರ ಕ್ಯೂಸೆಕ್ ಬಿಡುತ್ತೇವೆ ಎಂದು ಹೇಳುತ್ತಾರೆ. 2012ರಲ್ಲೂ ನಾವು ಇದನ್ನೇ ಮಾಡಿದ್ದೆವು. ಇದರ ಮೇಲೆ ಸುಪ್ರೀಂ ಕೋರ್ಟ್ 15 ಸಾವಿರ ಕ್ಯೂಸೆಕ್ ನೀರನ್ನು 10 ದಿನ ಬಿಡಲು ಹೇಳಿತು. ಬಳಿಕ ಸೆ.16ಕ್ಕೆ ಮತ್ತೆ ವಿಚಾರಣೆ ಬರುತ್ತದೆ, ಆಗ ಮತ್ತೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ನೀರು ಬಿಡಬೇಡಿ ಎಂದಿದ್ದರು: ಸೆ.6ರಂದು ಸರ್ವಪಕ್ಷ ಸಭೆ ನಡೆದಾಗ ಬಿಎಸ್‍ವೈ, ಶೆಟ್ಟರ್ ನೀರು ಬಿಡಬಾರದು ಎಂದು ಹೇಳಿದ್ದರು. ದತ್ತಾ ಅವರೂ ನೀರು ಬಿಡಬಾರದು ಎಂದು ಹೇಳಿದ್ದರು. 1995ರಲ್ಲೂ ನಾವು ನೀರು ಬಿಟ್ಟಿದ್ದೆವು. 2002, 2012, ಬಳಿಕ ಈಗ ನೀರು ಬಿಟ್ಟಿದ್ದೇವೆ. ಇದೇ ಸಭೆಯಲ್ಲಿ 15 ಸಾವಿರ ಕ್ಯೂಸೆಕ್ ಹೆಚ್ಚಾಯಿತು ಎಂದು ಮಾರ್ಪಾಡು ಅರ್ಜಿ ಹಾಕುವ ಬಗ್ಗೆ ಚರ್ಚೆ ಮಾಡಿದ್ದೆವು.
ಕಳೆದ 50 ವರ್ಷಗಳಿಂದ ತಮಿಳುನಾಡಿನಲ್ಲಿ ಅವರಿಗೆ ಈಶಾನ್ಯ ಮಳೆ ಕೈಕೊಟ್ಟಿಲ್ಲ. ನಮ್ಮಲ್ಲಿ ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ. ಯಾವತ್ತೂ ತಮಿಳುನಾಡಿಗೆ ಬೆಳೆ ಹಾನಿಯಾಗಿಲ್ಲ. ಈಗ ಬೆಳೆಯುವ ಸಾಂಬಾ ಬೆಳೆಗೆ ನೀರು ಕೇಳುತ್ತಾರೆ. ಅವರ ಬಳಿಕ ಇರುವ ಅಂತರ್ಜಲವನ್ನು ತಮಿಳುನಾಡು ಬಳಸುತ್ತಿಲ್ಲ. ಕುಡಿಯುವ ನೀರಿಗೆ ನಾವು ಎಲ್ಲಿಗೆ ಹೋಗೋಣ.? ನಮ್ಮ ರೈತರು ಬೆಳೆ ತ್ಯಾಗ ಮಾಡಿದ್ದಾರೆ. ನಮ್ಮ ರೈತರು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ನಾನು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನಾವು ಸಂವಿಧಾನದ ಎಲ್ಲಾ ಅಂಗಗಳ ಮೇಲೂ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇವೆ. ಯಾವುದಕ್ಕೂ ಅಗೌರವ ತೋರುವ ಉದ್ದೇಶ ಇಲ್ಲ. ಇಷ್ಟೆಲ್ಲಾ ಕಷ್ಟ ಇದ್ದರೂ ಕೂಡಾ ನಾವು 14 ದಿನ ನೀರು ಬಿಡಬೇಕಾಯಿತು. ಕಷ್ಟಕರ ಪರಿಸ್ಥಿತಿಯಲ್ಲೂ ಸೆ.20ರವರೆಗೆ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇವೆ. ಕುಡಿಯುವ ನೀರಿಗೆ 27 ಟಿಎಂಸಿ ಬೇಕು. ನಮ್ಮ ಬೆಳೆಗಳಿಗೆ ನೀರು ಕೊಡಲು 47 ಟಿಎಂಸಿ ನೀರು ಬೇಕು. ಇವೆಲ್ಲಕ್ಕೆ ನೀರೇ ಇಲ್ಲ. ರೈತರ ಹಿತ ಕಾಪಾಡುತ್ತೇವೆ ಎಂದು ನಾವೆಲ್ಲ ಹೇಳಿಕೊಂಡು ಬಂದಿದ್ದೇವೆ. ಮಾತ್ರವಲ್ಲ ರೈತರ ಹಿತ ಕಾಯುವುದು ನಮ್ಮ ಸದನದ ಜವಾಬ್ದಾರಿ. ಸದನ ಏನು ತೀರ್ಮಾನ ಕೊಡುತ್ತೆ ಎಂದು ಕೇಳಲು ಅಧಿವೇಶನಕ್ಕೆ ಬಂದಿದ್ದೇವೆ. ಸದನದ ನಿರ್ಣಯಕ್ಕೆ ನಾವು ಬದ್ಧವಾಗಿರುತ್ತೇವೆ. ಇದು ನಮ್ಮ ರೈತರಿಗೆ ನಾವು ಕೊಡುವ ಭರವಸೆ. ಜನರಿಗೆ ಕುಡಿಯುವ ನೀರು ಕೊಡಬೇಕು, ರೈತರ ಹಿತ ಕಾಪಾಡಬೇಕು
ಜನರಿಗೆ ನೀರು ಕೊಡುತ್ತೇವೆ: ಏನೇ ಕಷ್ಟವಾಗಲಿ ಜನರಿಗೆ ನೀರು ಕೊಡುತ್ತೇವೆ. ರೈತರಿಗೆ ನೀರು ಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಜನರ ತೀರ್ಪನ್ನು ಧಿಕ್ಕರಿಸಿ ಹೋಗಲು ಸಾಧ್ಯವಿಲ್ಲ. ಸೆ.21ರಂದು ಸರ್ವಪಕ್ಷ ಸಭೆ ಕರೆದೆವು. ದೇವೇಗೌಡರು ವಿಶೇಷವಾಗಿ ಆ ಸಭೆಗೆ ಬಂದರು. ಸಂಕಷ್ಟದ ಸ್ಥಿತಿ ಇರುವುದರಿಂದ ನಾನು ಬಂದಿದ್ದೇನೆ ಎಂದು ದೇವೇಗೌಡರು ಹೇಳಿದರು. ದೇವೇಗೌಡರಿಗೂ ಸಾಕಷ್ಟು ಅನುಭವವಿದೆ. ದೇವೇಗೌಡರು ಸೆ.5 ಹಾಗೂ 12ರಂದು ಆದೇಶವಾದಾಗ ನೀರು ಬಿಡಬೇಕು ಎಂದು ಹೇಳಿದರು. ಮೊನ್ನೆಯ ಆದೇಶ ಬಂದ ಬಳಿಕ ನಡೆದ ಸರ್ವಪಕ್ಷ ಸಭೆಯಲ್ಲಿ ಯಾವ ಕಾರಣಕ್ಕೂ ನೀರು ಕೊಡಬೇಡಿ ಎಂದು ಹೇಳಿದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ನ್ಯಾಯಾಧೀಶರು, ಮಾಜಿ ಅಡ್ವಕೇಟ್ ಜನರಲ್‍ಗಳನ್ನೂ ಭೇಟಿಯಾಗಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದಿದ್ದೇನೆ. ನ್ಯಾಯಾಲಯ ಕೊಟ್ಟ ಆದೇಶ ಪಾಲನೆ ಮಾಡಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಸಂಯಮದಿಂದ ವರ್ತಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮಾಧ್ಯಮಗಳಿಗೂ, ರಾಜ್ಯದ ಜನರಿಗೂ ಧನ್ಯವಾದ ಹೇಳುತ್ತೇನೆ. ಜನರು ಸಂಯಮದಿಂದ ವರ್ತಿಸಿದ್ದಾರೆ. ಬೆಳೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ಮಾಡುತ್ತೇನೆ. ನಾವು ನ್ಯಾಯಾಲಯಕ್ಕೆ ಸೆಡ್ಡು ಹೊಡೆದಿಲ್ಲ, ನಮಗೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿ ಮಾತು ಮುಗಿಸಿದರು ಸಿಎಂ ಸಿದ್ದರಾಮಯ್ಯ.