ಬೆಂಗಳೂರು: ಇದೊಂದು ಐತಿಹಾಸಿಕ ಅಧಿವೇಶನ. ಇಂದು ಈ ದೇಶ ನಮ್ಮನ್ನು ಗಮನಿಸುತ್ತದೆ. ಸುಪ್ರೀಂ ಕೋರ್ಟ್ ಸಹ ನಮ್ಮನ್ನು ಗಮನಿಸುತ್ತದೆ. ಕನ್ನಡ ನೆಲ ಜಲದ ಹಿತಾಸಕ್ತಿ ಸಲುವಾಗಿ ನಿರ್ಣಯ ಅಗತ್ಯ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಇಂಗ್ಲಿಷ್‍ನಲ್ಲಿ ನಿರ್ಣಯದ ಪ್ರತಿಯನ್ನು ಓದಿದರೆ, ಜೆಡಿಎಸ್‍ನ ವೈ ಎಸ್‍ವಿ ದತ್ತಾ ಕನ್ನಡದದಲ್ಲಿ ಓದಿದರು.
ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯ:
2016-17ನೇ ಜಲವರ್ಷದಲ್ಲಿ ಸಂಕಷ್ಟದ ತೀವ್ರ ಗಂಭೀರ ಪರಿಸ್ಥಿತಿ ಇರುವುದನ್ನು ಈ ಸದನವು ತೀವ್ರ ಆತಂಕದಿಂದ ಗಮನಿಸಿದೆ. ಆದರೆ ನೀರಿನ ಕೊರತೆ ಪ್ರಮಾಣವೇನು ಎಂಬುದು ಈ ಋತುವಿನ ಅಂತ್ಯ ಅಂದರೆ 31-01-2017ರ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ ಎಂಬುದನ್ನು ಈ ಸದನ ಗಮನಿಸಿದೆ.
ಕಾವೇರಿ ಕೊಳ್ಳದ 4 ಜಲಾಶಯಗಳಾದ ಕೆಆರ್‍ಎಸ್, ಹೇಮಾವತಿ, ಹಾರಂಗಿ, ಕಬಿನಿಯಲ್ಲಿ ನೀರಿನ ಮಟ್ಟ ಅಂತ್ಯಂತ ತಳಮಟ್ಟದ ಹಂತಕ್ಕೆ ತಲುಪಿರುವುದನ್ನು ಮತ್ತು ಕೇವಲ 27.6 ಟಿಎಂಸಿ ಮಾತ್ರ ನೀರು ಇರುವುದನ್ನು ಸದನ ಆತಂಕದಿಂದ ಪರಿಗಣಿಸಿದೆ.
ಈ ಗಂಭೀರ ಮತ್ತು ಆತಂಕಕಾರಿ ವಾಸ್ತವ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಾಗಿ ಮಾತ್ರ ಈಗಿರುವ 4 ಜಲಾಶಯಗಳ ಒಟ್ಟಾರೆ ಜಲಸಂಗ್ರಹಣೆಯಿಂದ ನೀರನ್ನು ಬಳಸಬೇಕೆಂದು ಸರ್ಕಾರಕ್ಕೆ ಈ ಸದನವು ನಿರ್ಣಯದ ಮೂಲಕ ನಿರ್ದೇಶಿಸುತ್ತದೆ.
ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಜನರ ಹಿತಾಸಕ್ತಿ ಪರಿಗಣಿಸಿ ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಹಾಲಿ ಇರುವ ಒಟ್ಟಾರೆ ಜಲಸಂಗ್ರಹಣೆಯಾಗಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಕೊಳ್ಳದ ಜನರಿಗೆ ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಹಾಗೆಯೇ ಸಂಪೂರ್ಣವಾಗಿ ಉಳಿಸಿಕೊಳ್ಳಲು ಇದಕ್ಕೆ ಹೊರತಾಗಿ ಬೇರೆ ಯಾವುದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲವೆಂದು ನಿರ್ಣಯವನ್ನು ಈ ಸದನವು ಸರ್ವಾನುಮತದಿಂದ ಕೈಗೊಳ್ಳುತ್ತದೆ.