ನವದೆಹಲಿ: ಸಾಧ್ಯವಾದರೆ ಕಾವೇರಿ ನೀರು ಬಿಡಲು ಪ್ರಯತ್ನಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಕರ್ನಾಟಕದಿಂದ ತಮಿಳುನಾಡಿಗೆ 50 ಟಿಎಂಸಿ ಅಡಿ ಕಾವೇರಿ ನೀರು ಹರಿಸಬೇಕು ಎಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ.ದೀಪಕ್ ಮಿಶ್ರಾ, ನ್ಯಾ.ಉದಯ್ ಲಲಿತ್ ಪೀಠದಲ್ಲಿ ನಡೆಯಿತು. ಈ ವೇಳೆ ನೀವೂ ಬದುಕಿ, ಬೇರೆಯವರನ್ನೂ ಬದುಕಲು ಬಿಡಿ ಎಂಬ ತತ್ವ ಅಳವಡಿಸಿಕೊಳ್ಳಬೇಕು. ಸಾಧ್ಯವಾದರೆ ನೀರನ್ನು ಹರಿಸಿ ಎಂದು ಸಲಹೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು.
ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರುವ ಬಿಡಲು ಸಾಧ್ಯ ಎಂಬುದನ್ನು ಸೋಮವಾರ ತಿಳಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಸೂಚಿಸಿದೆ. ಸೋಮವಾರ ಎರಡು ರಾಜ್ಯದ ವಾದಗಳು ನಡೆಯಲಿರುವುದರಿಂದ ಸುದೀರ್ಘ ವಿಚಾರಣೆ ನಡೆಯಲಿದೆ.
ಕಾವೇರಿ ನ್ಯಾಯಮಂಡಳಿ ಸೂಚನೆ ಮೇರೆಗೆ ಕರ್ನಾಟಕ ನೀರು ಹರಿಸಿಲ್ಲ. ಈ ಸಾಲಿನಲ್ಲಿ ಅಂದಾಜು 50 ಟಿಎಂಸಿ ಅಡಿ ನೀರನ್ನು ಬಿಡಬೇಕಿತ್ತು. ತಕ್ಷಣವೇ 25 ಟಿಎಂಸಿ ಅಡಿ ನೀರು ಹರಿಸಲು ಸೂಚಿಸಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಆದರೆ ಈ ಬಾರಿ ಮುಂಗಾರು ಕೈ ಕೊಟ್ಟಿದ್ದು ಬರಗಾಲ ಸ್ಥಿತಿ ಮುಂದುವರಿದಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಸಂಕಷ್ಟವಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದ ಮಂಡಿಸುತ್ತಿದೆ.
The post ನೀವೂ ಬದುಕಿ, ಬೇರೆಯವರನ್ನೂ ಬದುಕಲು ಬಿಡಿ; ಕರ್ನಾಟಕಕ್ಕೆ ಸುಪ್ರೀಂ ಸಲಹೆ appeared first on Kannada Public tv.