ನವದೆಹಲಿ: ನ್ಯಾನೋ ಕಾರು ಉತ್ಪಾದನೆಗೆ ಅಂದಿನ ಪಶ್ಚಿಮ ಬಂಗಾಳದ ಸಿಪಿಎಂ ಸರ್ಕಾರ ಟಾಟಾ ಕಂಪೆನಿಗೆ ಸಿಂಗೂರ್‍ನಲ್ಲಿ ನೀಡಿದ್ದ 1 ಸಾವಿರ ಎಕರೆ ಜಾಗದ ಒಪ್ಪಂದವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಿದ್ದು ಸರಿಯಲ್ಲ. ಅಷ್ಟೇ ಅಲ್ಲದೇ ಈ ಒಪ್ಪಂದವೇ ಅಕ್ರಮವಾಗಿದ್ದು ವಶಪಡಿಸಿಕೊಂಡ ಫಲವತ್ತಾದ ಭೂಮಿಯನ್ನು 12 ವಾರಗಳ ಒಳಗಡೆ ಹಿಂದಿರುಗಿಸಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.
ಈ ಕಾನೂನು ಹೋರಾಟದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರೈತರಿಗೆ ಜಯವಾಗಿದ್ದು, ಸಿಪಿಎಂ ಮತ್ತು ಟಾಟಾ ಕಂಪೆನಿಗೆ ಬಾರೀ ಮುಖಭಂಗವಾಗಿದೆ.
ಟಾಟಾ ಕಂಪೆನಿಯ ಪರವಾಗಿ ಕಾಂಗ್ರೆಸ್ ನಾಯಕ, ವಕೀಲ ಅಭಿಷೇಕ್ ಮನು ಸಿಂಘ್ವಿ, ಸಾರ್ವಜನಿಕ ಹಿತಾದೃಷ್ಟಿಯಿಂದ ಟಾಟಾ ಕಂಪೆನಿಯ ಜಾಗದ ಭೂ ಸ್ವಾಧೀನ ಒಪ್ಪಂದವನ್ನು ಮಾನ್ಯಮಾಡಬೇಕೆಂದು ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಟಾಟಾ ಮೋಟಾರ್ಸ್ ನ್ಯಾನೋ ಕಾರು ಉತ್ಪಾದನೆಗೆ ಆರಂಭದಲ್ಲಿ ಗುಜರಾತ್ ನಲ್ಲಿ ಕಾರ್ಖಾನೆ ತೆರೆಯಲು ಮುಂದಾಗಿತ್ತು. ಈ ವೇಳೆ ಅಲ್ಲಿನ ರೈತರು ಪ್ರಬಲವಾದ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳವನ್ನು ಅಂದು ಆಳುತ್ತಿದ್ದ ಬುದ್ಧದೇವ್ ಭಟ್ಟಾಚಾರ್ಯ ಸರ್ಕಾರ 2006ರಲ್ಲಿ ಟಾಟಾ ಕಂಪೆನಿಗೆ ಸಿಂಗೂರಿನಲ್ಲಿ ಜಾಗ ನೀಡಿತ್ತು. ಈ ಜಾಗ ನೀಡಿದ್ದನ್ನು ಖಂಡಿಸಿ ಟಿಎಂಸಿ ಭಾರೀ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಟಾಟಾ ಕಾರ್ಖಾನೆ ನಿರ್ಮಾಣವನ್ನು ಅರ್ಧದಲ್ಲೇ ನಿಲ್ಲಿಸಿತ್ತು. ಸರ್ಕಾರ ಜಾಗವನ್ನು ಮಾರಾಟ ಮಾಡಿದ್ದನ್ನು ವಿರೋಧಿಸಿ ರೈತರು ಕೋರ್ಟ್ ಮೊರೆ ಹೋಗಿದ್ದರು.
2011ರಲ್ಲಿ ಅಧಿಕಾರ ಬಂದ ಮಮತಾ ಬ್ಯಾನರ್ಜಿ ಟಾಟಾ ಕಂಪೆನಿಗೆ ನೀಡಿದ್ದ ಜಾಗವನ್ನು ವಶಪಡಿಸಿಕೊಳ್ಳಲು ಕಾನೂನು ಪಾಸ್ ಮಾಡಿತ್ತು. ಟಾಟಾಗೆ ಜಾಗ ನೀಡಿದ ವಿವಾದ ಜಾಗತಿಕ ಮಟ್ಟದಲ್ಲೂ ಸುದ್ದಿಯಾಗಿತ್ತು. ರೈತರು ನಮ್ಮ ಫಲವತ್ತಾದ ಭೂಮಿಯನ್ನು ಸರ್ಕಾರ ಟಾಟಾಗೆ ನೀಡಿದ್ದಾರೆ ಎಂದು ಹೇಳಿ ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದರು.
The post ಸುಪ್ರೀಂನಿಂದ 1 ಸಾವಿರ ಎಕರೆ ಟಾಟಾ ಡೀಲ್ ರದ್ದು; ಮಮತಾಗೆ ಜಯ appeared first on Kannada Public tv.