
ಮಂಡ್ಯ: ಮೈ ಮೇಲೆ ಇರುವ ಚಿನ್ನಾಭರಣ, ಸರ ಕಿತ್ತುಕೊಂಡು ಹೋಗುವ ಈ ಕಾಲದಲ್ಲಿ ರಾಗಿ ಮೂಟೆಯಲ್ಲಿ ಸಿಕ್ಕ ಸುಮಾರು 70 ಗ್ರಾಂ ತೂಕದ ಚಿನ್ನಾಭರಣ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಜಿಲ್ಲೆಯ ಬಸರಾಳು ಗ್ರಾಮದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಕಲ್ಲಿನಾಥಪುರ ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನ ಹೆಚ್ಚಾಗುತ್ತಿದ್ದ ಹಿನ್ನೆಲೆ, ಈ ಗ್ರಾಮದ ಕಲ್ಲೇಗೌಡ ಎಂಬವರ ಪತ್ನಿ ಲಕ್ಕಮ್ಮ ಬೀರಿನಲ್ಲಿ ಇದ್ದ 70 ಗ್ರಾಂ ಒಡವೆಯನ್ನು ರಾಗಿ ಮೂಟೆಯಲ್ಲಿ ಇಟ್ಟು ಮಗನ ಜೊತೆ ಬೆಂಗಳೂರಿಗೆ ತೆರಳಿದ್ದಾರೆ. ಇದಾದ ಬಳಿಕ ಕಲ್ಲೇಗೌಡ ಮನೆಯಲ್ಲಿ ಇದ್ದ ರಾಗಿ ಮೂಟೆಯಲ್ಲಿ ಚಿನ್ನ ಇರುವುದು ತಿಳಿಯದೇ ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!
ರಾಗಿ ವ್ಯಾಪಾರಿಗಳು ಖರೀದಿ ಮಾಡಿದ ರಾಗಿಯನ್ನು ಬಸರಾಳಿನ ಬೋರೇಗೌಡ ಮತ್ತು ತಿಮ್ಮೇಗೌಡ ಎಂಬವರ ಶ್ರೀನಿವಾಸ ರೈಸ್ ಮಿಲ್‍ಗೆ ಮಾರಾಟ ಮಾಡಿದ್ದಾರೆ. ಇದಾದ ನಂತರ ಈ ರೈಸ್ ಮಿಲ್‍ಗೆ ಉತ್ತಮ ಗುಣಮಟ್ಟದ ರಾಗಿ ಬೇಕೆಂದು ಬೆಂಗಳೂರಿನಿಂದ ಬೇಡಿಕೆ ಬರುತ್ತದೆ. ಹೀಗಾಗಿ ತಮ್ಮ ಬಳಿ ಇದ್ದ ರಾಗಿ ಗುಣಮಟ್ಟ ಪರೀಕ್ಷಿಸಲು ಮೂಟೆಗಳಲ್ಲಿ ಇದ್ದ ರಾಗಿಯನ್ನು ಸುರಿದು ಪರಿಶೀಲನೆ ಮಾಡುವಾಗ ಒಂದು ಮೂಟೆಯಿಂದ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಕಂಡ ಕೆಲಸದ ಸಿಬ್ಬಂದಿ ಏನು ಅಂತಾ ನೋಡುವಾಗ ಬೋರೇಗೌಡ ಅಲ್ಲಿ ಒಡವೆ ಇರುವುದು ಕಂಡುಬಂದಿದೆ. ಇದನ್ನೂ ಓದಿ: 11 ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿ
ಬಳಿಕ ಆ ಬ್ಯಾಗ್ ಮೇಲೆ ಇದ್ದ ಚಿನ್ನದಂಗಡಿಯ ಹೆಸರಿನ ಅಂಗಡಿ ಹೋಗಿ ಈ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಈ ವೇಳೆ ನಿಜವಾದ ಮಾಲೀಕರಾದ ಕಲ್ಲೇಗೌಡ ಹಾಗೂ ಲಕ್ಕಮ್ಮ ಅವರು ಸಿಗುತ್ತಾರೆ. ನಂತರ ಅವರನ್ನು ಕರೆದು ಆಭರಣಗಳನ್ನು ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆಭರಣಗಳು ಮತ್ತೆ ಸಿಕ್ಕಿ ಸಂತೋಷದಿಂದ ಲಕ್ಕಮ್ಮ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
The post ಕಳ್ಳತನವಾಗುತ್ತೆ ಅಂತ ಚಿನ್ನಾಭರಣ ಬಚ್ಚಿಟ್ಟಿದ್ದ ರಾಗಿ ಮೂಟೆಯನ್ನೇ ಮಾರಿಬಿಟ್ಟ ಪತಿ- ಮುಂದೇನಾಯ್ತು? appeared first on Public TV.