
ಬೆಂಗಳೂರು: ಸರ್ಕಾರಿ ಶಾಲೆಗಳ ತರಗತಿಗಳು ಆರಂಭವಾಗಿದ್ದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಆಮ್ ಆದ್ಮಿ ಪಾರ್ಟಿಯು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ಈ ಮಟ್ಟಿಗೆ ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದೆ.
ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ, ಶಾಲೆಗಳು ಆರಂಭವಾಗಿ ತಿಂಗಳು ಕಳೆದಿದೆ. ನವೆಂಬರ್ 2ರಿಂದ ಎಲ್ಲಾ ತರಗತಿಗಳು ಪೂರ್ಣಾವಧಿ ನಡೆಯಲಿವೆ. ಆದರೆ ಸರ್ಕಾರವು ಒಂದು ಜೊತೆ ಸಮವಸ್ತ್ರವನ್ನೂ ಸಿದ್ಧಪಡಿಸಿಕೊಂಡಿಲ್ಲ. ಇನ್ನೂ ಎರಡು ತಿಂಗಳು ಸಮವಸ್ತ್ರ ವಿತರಣೆ ಸಾಧ್ಯವಿಲ್ಲವೆಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಶೂ, ಸಾಕ್ಸ್ ನೀಡಲು ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಲೂ ಸಾಧ್ಯವಾಗದಷ್ಟು ರಾಜ್ಯದ ಬೊಕ್ಕಸವನ್ನು ಬಿಜೆಪಿಯು ದಿವಾಳಿ ಮಾಡಿದೆಯೇ? ಎಂದು ಪ್ರಶ್ನೆ ಎತ್ತಿದೆ. ಇದನ್ನೂ ಓದಿ: ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ: ಎಎಪಿ
ಸರ್ಕಾರವು ಶಾಸಕರಿಗೆ, ಸಚಿವರಿಗೆ ಐಷಾರಾಮಿ ಕಾರು, ಬೆಂಗಾವಲು ಪಡೆ, ವೇತನ ಹಾಗೂ ಅನೇಕ ಭತ್ಯೆಗಳನ್ನು ನೀಡುತ್ತದೆ. ಅದನ್ನು ಕಡಿತಗೊಳಿಸಿಯಾದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲಿ. ಕೇವಲ ಒಂದು ಜೊತೆ ಸಮವಸ್ತ್ರ ವಿತರಿಸಿದರೆ ಸಾಲದು. ಒಂದು ಸಮವಸ್ತ್ರವನ್ನು ವಾರವಿಡೀ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಕನಿಷ್ಠ ಎರಡು ಜೊತೆಯಾದರೂ ವಿತರಿಸಬೇಕು. ಉತ್ತಮ ಗುಣಮಟ್ಟದ ಸಮವಸ್ತ್ರವನ್ನು ನೀಡಬೇಕು. ನಾಡಿನ ಭವಿಷ್ಯವೇ ಆಗಿರುವ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಶರತ್ ಖಾದ್ರಿ ಹೇಳಿದರು. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜಾಮೀನು ಮಂಜೂರು
ಆಮ್ ಆದ್ಮಿ ಪಾರ್ಟಿಯ ಬೊಮ್ಮನಹಳ್ಳಿ ವಾರ್ಡ್ ಅಧ್ಯಕ್ಷರಾದ ಯೋಗಿತಾ ರೆಡ್ಡಿಯವರು ಮಾತನಾಡಿ, ಪ್ರೌಢಶಾಲೆಗಳು ಆರಂಭವಾಗಿ ಎರಡೂವರೆ ತಿಂಗಳು ಕಳೆದಿದೆ. ಆದರೂ ಶಿಕ್ಷಣ ಇಲಾಖೆಯು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ನೀಡಿಲ್ಲ. ಪ್ರಮುಖವಾಗಿ ಗ್ರಾಮೀಣ ಭಾಗದ ಹಾಗೂ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಸ್ಯಾನಿಟರಿ ಪ್ಯಾಡ್‍ಗಳನ್ನು ಸರ್ಕಾರ ತಕ್ಷಣವೇ ಪೂರೈಸದಿದ್ದರೆ ವಿದ್ಯಾರ್ಥಿನಿಯರು ನಿರ್ದಿಷ್ಟ ದಿನಗಳಲ್ಲಿ ಶಾಲೆಗೆ ರಜೆ ಹಾಕುವ ಸಾಧ್ಯತೆಯಿದೆ. ಇದು ಅವರ ಶೈಕ್ಷಣಿಕ ಸಾಧನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
The post ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲೂ ಸಾಧ್ಯವಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ? – ಎಎಪಿ ಪ್ರಶ್ನೆ appeared first on Public TV.