ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯಗೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಆದರೆ ಇಲ್ಲಿನ ಬಿಎಸ್‍ಎನ್‍ಎಲ್ ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬಂದವರು ಯಾರನ್ನೂ ಸಂಪರ್ಕಿಸಲಾಗದೇ ಚಡಪಡಿಸುತ್ತಾರೆ. ಈ ಬಗ್ಗೆ ದೇವಳದವರಾಗಿ, ಮೊಬೈಲ್ ಕಂಪನಿಗಳಾಗಲಿ ತಲೆ ಕೆಡಿಸಿಕೊಳ್ಳಲೇ ಇಲ್ಲ. ಆದರೆ ಸ್ಥಳೀಯ ಯುವಕರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದ ಪರಿಣಾಮ ಇದೀಗ ಮೊಬೈಲ್ ಟವರ್ ನಿರ್ಮಾಣವಾಗುತ್ತಿದೆ.
ರಾಜ್ಯದ ನಂಬರ್ ಒನ್ ಆದಾಯ ತರುವ ದೇವಸ್ಥಾನವಾದ ಕುಕ್ಕೆಗೆ ದಿನಂಪ್ರತಿ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಆದರೆ ಬೆಟ್ಟ ಗುಡ್ಡಗಳ ನಡುವಿನ ಕುಮಾರ ಪರ್ವತದ ತಪ್ಪಲಲ್ಲಿ ಇರುವ ಕುಕ್ಕೆ ಕ್ಷೇತ್ರದಲ್ಲಿ ಮೊಬೈಲ್ ನೆಟ್‍ವರ್ಕ್ ನೆಟ್ಟಗಿಲ್ಲ. ಕುಕ್ಕೆಯಲ್ಲಿ ಪ್ರತಿದಿನ ಸಾವಿರಾರು ಜನ ಇರುವುದರಿಂದ ಎಲ್ಲಾ ನೆಟ್‍ವರ್ಕ್ ಲೈನ್‍ಗಳು ಒನ್‍ವೇಯಾಗುತ್ತದೆ. ಅದರಲ್ಲೂ ಅತ್ಯಧಿಕ ಜನ ಬಳಸುವ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ ಬಹಳ ಜೋರಾಗಿಯೇ ಇತ್ತು.
ಈ ಬಗ್ಗೆ ಅಧಿಕಾರಿಗಳಲ್ಲಿ ಸುಬ್ರಮಣ್ಯದ ನಿವಾಸಿಗಳು ಸಾಕಷ್ಟು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಗಲೇ ಇಲ್ಲ. ಕೊನೆಗೆ ಏನು ಮಾಡಬೇಕು ಎನ್ನುವುದು ತಿಳಿಯದೇ ಇದ್ದಾಗ ಯುವಕ ನಿತಿನ್ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ್ಯಪ್‍ನಲ್ಲಿ ಪತ್ರ ಬರೆದರು.
ಅತ್ಯಂತ ಪುಣ್ಯ ಕ್ಷೇತ್ರದಲ್ಲಿ ಜನ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸವಿಸ್ತಾರವಾಗಿ ಪ್ರಧಾನಿಗೆ ಪತ್ರದ ಮೂಲಕ ತಿಳಿಸಿದ್ದರು. ಆಶ್ಚರ್ಯವೆಂಬಂತೆ ಪ್ರಧಾನಿಗೆ ಪತ್ರ ಬರೆದ ಒಂದು ವಾರದಲ್ಲೇ ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಪ್ರಧಾನಿ ಕಾರ್ಯಾಲಯ ಚುರುಕು ಮುಟ್ಟಿಸಿದೆ. ಪ್ರಧಾನಿಯಿಂದ ಬಂದ ಸಕಾರಾತ್ಮಕ ಸ್ಪಂದನೆಗೆ ಸಾಕ್ಷಿಯಾಗಿ ಸುಬ್ರಮಣ್ಯದ ವಸತಿಗೃಹ ಕಟ್ಟಡ ಮೇಲೆ ಬಿಎಸ್‍ಎನ್‍ಎಲ್ ಹೊಸ ಟವರ್ ನಿರ್ಮಾಣ ಮಾಡುತ್ತಿದೆ.
ಪ್ರಧಾನಿಗೆ ಪತ್ರ ಬರೆದು ಹಲವು ವರ್ಷದಿಂದ ಆಗುತ್ತಿದ್ದ ಊರಿನ ಸಮಸ್ಯೆ ನೀಗಿಸುವ ಪ್ರಯತ್ನ ಮಾಡಿದ ನಿತಿನ್ ಕಾರ್ಯಕ್ಕೆ ಜನರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನಿಯ ಸೂಚನೆಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಟವರ್ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ಒನ್‍ವೇ ಸಂಪರ್ಕ ಹೊಂದಿದ್ದ ನೆಟ್ ವರ್ಕ್ ಸಮಸ್ಯೆ ಪರಿಹಾರಕ್ಕೆ ವರ್ಷಗಳಿಂದ ಕಾದರೂ ಪ್ರಯೋಜನವಾಗದಿದ್ದಾಗ ರೋಸಿ ಹೋಗಿದ್ದ ಜನ ಈಗ ನಿರಾಳರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸ್ಪಂದನೆಗೆ ಜನ ಸಂತಸಗೊಂಡಿದ್ದು, ವೇಗವಾಗಿ ಟವರ್ ನಿರ್ಮಾಣದ ಕಾರ್ಯವಾಗುವ ಭರವಸೆ ಹೊಂದಿದ್ದಾರೆ.
The post ಸುಬ್ರಹ್ಮಣ್ಯದಲ್ಲಿ ಮೊಬೈಲ್ ನೆಟ್‍ವರ್ಕ್ ಪ್ರಾಬ್ಲಂ ಬಗ್ಗೆ ಮೋದಿಗೆ ಪತ್ರ; ಮುಂದೇನಾಯ್ತು? appeared first on Kannada Public tv.