ಸಿ.ಎ. ರುದ್ರಮೂರ್ತಿ
ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಾಘುರಾಂ ರಾಜನ್ ತಮ್ಮ ಕೊನೆಯ ಹಣಕಾಸು ನೀತಿ ಪರಮಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ. ರಾಜನ್ ನಿರ್ಧಾರದಿಂದಾಗಿ ಬ್ಯಾಂಕ್‍ಗಳು ವಹಿವಾಟು ನಡೆಸಲು ಆರ್‍ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸುವ ಬಡ್ಡಿ ದರವಾದ ರೆಪೊ ಶೇ. 6.5, ನಗದು ಮೀಸಲು ಅನಪಾತ(ಸಿಆರ್‍ಆರ್) ಶೇ.4, ಎಸ್‍ಎಲ್‍ಆರ್ ಶೇ.21 ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
ಮೂರನೇ ಹಣಕಾಸು ನೀತಿ ವೇಳೆ ಆರ್‍ಬಿಐ 25 ಬೇಸಿಸ್ ಪಾಯಿಂಟ್ ಕಡಿತ ಗೊಳಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಹಣದುಬ್ಬರ ನಿಯಂತ್ರಿಸಲು ರಾಜನ್ ಬಡ್ಡಿದರವನ್ನು ಯಥಾಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ. ಆರ್‍ಬಿಐ ಈ ನಿರ್ಧಾರ ಮತ್ತು ಜಾಗತಿಕ ಮಾರುಕಟ್ಟೆಗಳ ಪರಿಣಾಮ ನಿಫ್ಟಿ 8650 ಅಂಕ ಸೆನ್ಸೆಕ್ಸ್ 28,000 ಅಂಕದಲ್ಲಿ ವಹಿವಾಟು ನಡೆಸುತ್ತಿದೆ.
ಮೊದಲ ತ್ರೈಮಾಸಿಕ ಕೆಲವರಿಗೆ ಲಾಭ ತಂದರೆ ಕೆಲವರಿಗೆ ಭಾರೀ ಹೊಡೆತ ನೀಡಿದೆ. ವಿಶೇಷವಾಗಿ ಸರ್ಕಾರಿ ಸ್ವಾಮ್ಯದ ದಿಗ್ಗಜ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(ಎಸ್‍ಬಿಐ) ನಿವ್ವಳ ಲಾಭ ಶೇ.78ರಷ್ಟು ಕುಸಿತ ಕಂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 4,714 ಕೋಟಿ ರೂ. ಇದ್ದ ಬ್ಯಾಂಕಿನ ನಿವ್ವಳ ಲಾಭ ಈ ಬಾರಿ 1046 ಕೋಟಿ ರೂ.ಗೆ ಇಳಿಕೆಯಾಗಿದೆ. ವಸೂಲಾಗದ ಸಾಲದ ಪ್ರಮಾಣ(ಎನ್‍ಪಿಎ) ಶೇ.4.29ರಿಂದ ಶೇ.6.49 (56,420.77 ಕೋಟಿ ರೂ.ನಿಂದ 1,01,541 ಕೋಟಿ ರೂ.ಗೆ) ಏರಿಕೆಯಾದ ಕಾರಣ ಈ ಬಾರಿ ಲಾಭದ ಪ್ರಮಾಣ ಇಳಿಕೆಯಾಗಿದೆ.
ಆಹಾರ ಹಣದುಬ್ಬರ ದರದಿಂದಾಗಿ ಜುಲೈ ತಿಂಗಳಿನಲ್ಲಿ ಗ್ರಾಹಕ ಬೆಲೆ ಸ್ಯೂಚಂಕ(ಸಿಪಿಐ) ಆಧಾರಿಸಿದ ಚಿಲ್ಲರೆ ಹಣದುಬ್ಬರ ಶೇ.5.7 ರಿಂದ ಶೇ.6.07ಕ್ಕೆ ಏರಿಕೆಯಾಗಿದೆ. ಸಿಪಿಐ ಏರಿಕೆಯಾದರೂ ಜೂನ್‍ನಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಪ್ರಗತಿ ಕಂಡಿದೆ. ಮೇ ತಿಂಗಳಿಗೆ ಹೋಲಿಸಿದರೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.1.2 ರಿಂದ 2.1ಕ್ಕೆ ಪ್ರಗತಿ ಸಾಧಿಸಿದೆ.
ಇನ್ನು ಸರಕು ಮಾರುಕಟ್ಟೆಗೆ ಬಂದರೆ 10 ಗ್ರಾಂ 22 ಕ್ಯಾರೆಟ್ ಚಿನ್ನ 30,900 – 31,300 ರೂ. ಅಸುಪಾಸಿನಲ್ಲಿ ಮಾರಾಟವಾಗುತ್ತಿದ್ದರೆ, 1 ಕೆಜಿ ಬೆಳ್ಳಿ 46,000 – 47,300 ರೂ. ಅಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿ ಬೆಳ್ಳಿ ದರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.
ನಿಫ್ಟಿ 8570 ಅಂಕದಲ್ಲಿದ್ದು 8750-8800 ಅಂಕದತ್ತ ದಾಪುಗಾಲು ಇಡುತ್ತಿದೆ. ಬ್ಯಾಂಕ್ ನಿಫ್ಟಿ 18600ದ ಹಂತದಲ್ಲಿ ಸಪೋರ್ಟ್ ಹೊಂದಿದ್ದು, 19050 ಹಂತ ತಲುಪುವ ನಿರೀಕ್ಷೆಯಿದೆ. ಈ ವಾರದಲ್ಲಿ ರಿಯಲ್ ಎಸ್ಟೇಟ್, ಆಟೋ ಮತ್ತು ಕೆಲ ಬ್ಯಾಂಕ್‍ಗಳ ಸ್ಟಾಕ್‍ಗಳು ಉತ್ತಮ ಫಲಿತಾಂಶ ನೀಡುವ ಸಾಧ್ಯತೆಯಿದೆ. ದೀರ್ಘವಾಧಿ ಲಾಭವನ್ನು ನೋಡಿಕೊಂಡು ಉತ್ತಮ ಕಂಪೆನಿಯ ಷೇರಿಗೆ ಹಣ ಹೂಡಿದರೆ ಲಾಭ ಬರಬಹುದು ಎಂದು ಹೂಡಿಕೆ ತಜ್ಞರು ಸಲಹೆ ನೀಡಿದ್ದಾರೆ.
The post ಅಲ್ಪಾವಧಿ ಬಡ್ಡಿದರದಲ್ಲಿ ಬದಲಾವಣೆ ಮಾಡದ ರಾಜನ್; ವಾರದ ಮಾರುಕಟ್ಟೆ ಅವಲೋಕನ appeared first on Kannada Public tv.