ಬೆಂಗಳೂರು: ರಾಜ್ಯ ಸರ್ಕಾರ ದಂಡ ವಿಧಿಸಿದ್ದ ರೆಸಾರ್ಟ್ ನಲ್ಲಿ ಈಗ ಗುಜರಾತ್ ಕೈ ಶಾಸಕರು ಉಳಿದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು. ಬಿಡದಿ ಬಳಿ ಇರುವ ಈಗಲ್‍ಟನ್ ರೆಸಾರ್ಟ್ ಗೆ ನಾಲ್ಕು ದಿನಗಳ ಹಿಂದೆಯಷ್ಟೇ ಪೆನಾಲ್ಟಿ ವಿಧಿಸಿ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿತ್ತು. ಈಗ ಅದೇ ರೆಸಾರ್ಟ್ ನಲ್ಲಿ ಗುಜರಾತ್ ನ 42 ಶಾಸಕರು ವಾಸ್ತವ್ಯ ಹೂಡಿದ್ದಾರೆ.
77 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಕ್ಕೆ ಈಗಲ್‍ಟನ್ ರೆಸಾರ್ಟ್ ಮೇಲೆ ರಾಜ್ಯ ಸರ್ಕಾರ ಬರೋಬ್ಬರಿ 982 ಕೋಟಿ ರೂ. ದಂಡ ಹಾಕಿತ್ತು. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಪೆನಾಲ್ಟಿ ಹಾಕಲು ಕ್ಯಾಬಿನೆಟ್ ತೀರ್ಮಾನಿಸಿದೆ. 982 ಕೋಟಿ ರೂ. ದಂಡ ಕಟ್ಟಬೇಕು ಇಲ್ಲದೇ ಇದ್ದರೆ 77 ಎಕ್ರೆ ಭೂಮಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದರು.
2012ರಲ್ಲೂ ಬಿಜೆಪಿ ಸರ್ಕಾರ ಇದೇ ರೆಸಾರ್ಟ್‍ನ 72 ಎಕರೆ ಸಕ್ರಮಕ್ಕೆ 82 ಕೋಟಿ ರೂ. ಪೆನಾಲ್ಟಿ ಹಾಕಿತ್ತು. ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಆಂಧ್ರಪ್ರದೇಶದ ಉದ್ಯಮಿ ಮೇದಾ ಅಶೋಕ್‍ಗೆ ಈ ರೆಸಾರ್ಟ್ ಸೇರಿದ್ದು, 2000ನೇ ಇಸ್ವಿಯಲ್ಲಿ ರೆಸಾರ್ಟ್ ನಿರ್ಮಾಣವಾಗಿತ್ತು. 2013ರಿಂದ ಅವರ ಮಕ್ಕಳಾದ ಮೇದಾ ಕಿರಣ್ ಕುಮಾರ್, ಮೇದಾ ಚೇತನ್ ಅವರು ರೆಸಾರ್ಟ್ ನಡೆಸುತ್ತಿದ್ದಾರೆ. ವಿಶೇಷವಾಗಿ 2006 ರಲ್ಲಿ ಹೆಚ್‍ಡಿ ಕುಮಾರಸ್ವಾಮಿ ಸಿಎಂ ಆಗುವಾಗ ಇದೇ ರೆಸಾರ್ಟ್‍ನಲ್ಲಿ ಜೆಡಿಎಸ್ ಶಾಸಕರು ಇದ್ದರು. ಈಗ ಗುಜರಾತ್ ಶಾಸಕರು ಇಲ್ಲಿ ನೆಲೆಯಾಗಿದ್ದರಿಂದ ಈ ರೆಸಾರ್ಟ್ ಗೆ ಈಗ ಶಾಸಕರ ರೆಸಾರ್ಟ್ ಎನ್ನುವ ಹೆಸರು ಬಂದಿದೆ.
ಶುಲ್ಕ ಪಾವತಿ ಆಗುತ್ತೆ: ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾದ ಬಳಿಕ ಕೈ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿಯನ್ನು ಹೊತ್ತಿರುವ ಇಂಧನ ಸಚಿವ ಡಿಕೆ ಶಿವಕುಮಾರ್ ಮಾತನಾಡಿ , ಶಾಸಕರು ತಂಗಿರುವ ರೆಸಾರ್ಟ್ ವೆಚ್ಛವನ್ನು ಪಾವತಿಸಲಾಗುವುದು. ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿ ಎಲ್ಲ ಶುಲ್ಕವನ್ನು ಭರಿಸಲಿದೆ. ರೆಸಾರ್ಟ್ ನವರು ದಂಡವನ್ನು ಪಾವತಿ ಮಾಡಲೇಬೇಕು ಎಂದು ಅವರು ತಿಳಿಸಿದರು.