– ಸಹಜ ಸ್ಥಿತಿಯತ್ತ ಮಂಗಳೂರು
ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆಯ ವೇಳೆ ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ ರೋಡ್, ಕೈಕಂಬದಲ್ಲಿ ಶನಿವಾರ ನಡೆದ ಕಲ್ಲು ತೂರಾಟ ಪ್ರಕರಣ ಪೂರ್ವನಿಯೋಜಿತ ಕೃತ್ಯ ಎಂದು ಎಸ್‍ಪಿ ಸುಧೀರ್ ರೆಡ್ಡಿ ಹೇಳಿದ್ದಾರೆ.
ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಲ್ಲು ತೂರಾಟ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ. ಕಳೆದ ರಾತ್ರಿ ಮತ್ತೆ ಮೂರು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ರು.
ಇದೊಂದು ಪೂರ್ವ ನಿಯೋಜಿತ ಕೃತ್ಯ ಹೊರ ರಾಜ್ಯದಿಂದ ಬಂದವರಿಂದ ದುಷ್ಕೃತ್ಯವಾಗಿದೆ. ಗಲಾಟೆ ಎಬ್ಬಿಸಿದವರಲ್ಲಿ ಹೊರ ರಾಜ್ಯದ 3 ಮಂದಿ ಇದ್ದಾರೆ. ಸ್ಥಳೀಯರು ಅವರಿಗೆ ಸಹಕಾರ ಕೊಟ್ಟಿದ್ದಾರೆ. ಸ್ಥಳದಲ್ಲಿ ಉದ್ರಿಕ್ತರ ಗುಂಪು ಗಲಾಟೆ ಮಾಡಿದ್ದಲ್ಲ. ದುಷ್ಕರ್ಮಿಗಳ ಗುಂಪು ಸೇರಿಕೊಂಡು ಕಾನೂನು ಮೀರಿದ್ದಾರೆ ಎಂದು ಮಾಹಿತಿ ನೀಡಿದರು.
ಈಗ ಜಿಲ್ಲೆಯಲ್ಲಿ 1300 ಪೊಲೀಸರಿಂದ ಬಂದೋಬಸ್ತ್ ಇದೆ. ಪೊಲೀಸರು ರಾತ್ತಿ ಹಗಲು ಗಸ್ತಿನಲ್ಲಿದ್ದಾರೆ. ಸ್ಥಳದಲ್ಲಿ 1 ಕೆಎಸ್‍ಆರ್‍ಪಿ, ನಾಲ್ಕೈದು ಜೀಪ್ ಗಳಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸದ್ಯಕ್ಕೆ ಮಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಎಸ್‍ಪಿ ಸುಧೀರ್ ರೆಡ್ಡಿ ತಿಳಿಸಿದರು.
ಬಿ.ಸಿ ರೋಡ್, ಕೈಕಂಬ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಪಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಿ.ಸಿ ರೋಡ್ ಪೊಲೀಸ್ ಠಾಣೆಯಲ್ಲಿ ಮುಂದಿನ ತೀರ್ಮಾನಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ಜಿಲ್ಲಾಧಿಕಾರಿ ಡಾ. ಜಗದೀಶ್, ಎಸ್‍ಪಿ ಸುಧೀರ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದ ನಂತರ ಎಲ್ಲ ಧರ್ಮದ ಮುಖಂಡರ ಶಾಂತಿ ಸಭೆ ಕರೆಯುವ ಸಾಧ್ಯತೆಯಿದೆ ಎಂದು ಹೇಳಿದರು.