ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ಕೆಟ್ಟು ನವಜಾತ ಶಿಶು ಹಾಗೂ ಪೋಷಕರು ಪರದಾಡಿದ ಯಡವಟ್ಟಿನ ಬೆನ್ನಲ್ಲೆ ಕ್ಷುಲ್ಲಕ ಕಾರಣಕ್ಕೆ ಹೋಂಗಾರ್ಡ್ ಒಬ್ಬರು ರೋಗಿಯ ಕಡೆಯವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.
ನಜೀರ್ ಹಲ್ಲೆಗೊಳಗಾಗದ ವ್ಯಕ್ತಿ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂ ಗಾರ್ಡ್ ರಾಜಶೇಖರ್ ಎಂಬಾತ ನಜೀರ್ ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.
ನಜೀರ್ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ತಾಯಿ ಫಾತೀಮಾರನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದರು. ನಜೀರ್ ತಮ್ಮ ತಾಯಿಯನ್ನು ವೈದ್ಯರಿಗೆ ತೋರಿಸಲು ಚೀಟಿ ತೆಗೆದುಕೊಳ್ಳುವಾಗ ಈ ಹಲ್ಲೆ ನಡೆದಿದೆ.
ಇದನ್ನೂ ಓದಿ: ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು
ನಜೀರ್ ಅವರ ಕಣ್ಣಿನ ಕೆಳಭಾಗ ಹಾಗೂ ಹಣೆ ಮೇಲೆ ಗಾಯಗಳಾಗಿವೆ. ಹಣೆಗೆ ಮೂರು ಹೊಲಿಗೆ ಹಾಕಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕಣ್ಣಿನ ಸುತ್ತಲು ಊದಿಕೊಂಡಿದೆ. ಘಟನೆ ಹಿನ್ನೆಲೆ ಹೋಂಗಾರ್ಡ್ ರಾಜಶೇಕರನನ್ನ ವಜಾಗೊಳಿಸಿ ಆದೇಶಿಸಿರುವುದಾಗಿ ರಿಮ್ಸ್ ಮೆಡಿಕಲ್ ಸೂಪರಿಂಡೆಂಟ್ ಡಾ.ಬಸವರಾಜ್ ಪೀರಾಪುರೆ ಹೇಳಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.