ಚಿಕ್ಕಮಗಳೂರು: ಮಕ್ಕಳು ಕೀಟಲೆ ಮಾಡಿದರು ಎಂದು ತಂದೆಯೊಬ್ಬ ದೋಸೆ ಕಡ್ಡಿ ಬಿಸಿ ಮಾಡಿ ಬರೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಸ್ಗಲ್‍ನಲ್ಲಿ ನಡೆದಿದೆ.
ಹರೀಶ್ ಬರೆ ಹಾಕಿದ ಕ್ರೂರ ತಂದೆ. 10 ವರ್ಷದ ಹಿಂದೆ ಮದುವೆಯಾದ ಹರೀಶ್ ಹಾಗೂ ಪುಷ್ಪ ದಂಪತಿಗೆ 2 ಹೆಣ್ಣು, 2 ಗಂಡು ಮಕ್ಕಳಿವೆ. ಪಾಪಿ ತಂದೆಯ ಕೃತ್ಯದಿಂದ ಇದೀಗ ಎರಡು ಮಕ್ಕಳು ಓಡಾಡುವುದಕ್ಕೂ ಆಗದೇ ನರಕ ಅನುಭವಿಸುತ್ತಿದ್ದಾರೆ. ಮಕ್ಕಳ ದಯನೀಯ ಸ್ಥಿತಿ ಕಂಡು ಹೆತ್ತೊಡಲು ಕಣ್ಣೀರಲ್ಲಿ ಮುಳುಗಿದೆ.
ಸೈಕೋ ಹರೀಶ್ ವರ್ಷದ ಹಿಂದೆಯೂ ಪತ್ನಿ, ಮಕ್ಕಳಿಗೆ ವೈರ್‍ನಿಂದ ಹೊಡೆದು, ಮನೆಗೆ ಬೆಂಕಿ ಇಟ್ಟಿದ್ದನು. ಆಗ ಪತ್ನಿಯೇ ದೂರು ನೀಡಿ ಜೈಲಿಗೆ ಹಾಕಿಸಿದ್ದರು. ಮತ್ತೆ ಅವರೇ ಪತಿ ಸರಿ ಹೋಗಬಹುದು ಎಂದು ತಾನೇ ಹೋಗಿ ಜಾಮೀನು ನೀಡಿ ಮನೆಗೆ ಕರೆ ತಂದಿದ್ದರು. ಜೈಲಿನಿಂದ ಬಂದ ನಂತರ ಹರೀಶ್ ಮತ್ತೆ ತನ್ನ ವರಸೆ ಮುಂದುವರಿಸಿದ್ದಾನೆ.
ಮಕ್ಕಳ ಮುಗ್ಧತೆ ಕಂಡರೆ ಎಂಥವರು ಕೂಡ ಕರಗುತ್ತಾರೆ. ಇಲ್ಲಿ ಐ ಲವ್ ಯೂ ಅಪ್ಪ ಎಂದು ಎನಿಸಿಕೊಳ್ಳಬೇಕಿದ್ದ ಕುಡುಕ ಹರೀಶ್, ಮಕ್ಕಳ ಪಾಲಿಗೆ ವಿಲನ್ ಆಗಿದ್ದಾನೆ. ಸೈಕೋ ಪತಿಯ ಕಾಟ ತಡೆಯಲಾಗದೆ ಪುಷ್ಪ ತನ್ನ ನಾಲ್ಕು ಮಕ್ಕಳ ಸಮೇತ ತವರು ಸೇರಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಕೂಡಲೇ ಹರೀಶ್ ವಿರುದ್ಧ ಕ್ರಮ ಕೈಗೊಂಡು, ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಿದೆ.
The post ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ appeared first on Public TV News.