ಬೆಂಗಳೂರು: ಗುಂಡುಮಣಿ ಆರ್ಟ್ಸ್ ಮಾಲೀಕ ವೈ.ಎನ್. ಲೋಕೇಶ್ ಹೃದಯಾಘಾತದಿಂದ ಬಿಜಾಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಪೋಷಕ ನಟನಾಗಿ, ಖಳನಟನಾಗಿ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಅವರ ಜೊತೆ ಗುಂಡುಮಣಿ ಅವರು ಅಭಿನಯಿಸಿದ್ದಾರೆ. 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರೋ ಲೊಕೇಶ್‍ಗೆ ಗುಂಡುಮಣಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮರುನಾಮಕರಣ ಮಾಡಿದ್ರು. ಶಿವಣ್ಣ ಅಭಿನಯದ ಶ್ರೀಕಂಠ ಸಿನಿಮಾದ ಬೋರ್ಡ್ ಬರೆಯಲು ಬಿಜಾಪುರಕ್ಕೆ ತೆರಳಿದ್ದು ಇಂದು ಬೆಳಗ್ಗೆ 10 ಗಂಟೆಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಶಿವಣ್ಣ ಅಭಿನಯದ ಎ.ಕೆ 47 ಸಿನಿಮಾದಿಂದ ವೃತ್ತಿ ಜೀವನ ಶುರುಮಾಡಿದ ಲೋಕೇಶ್ ಶಿವಣ್ಣನ ಶ್ರೀಕಂಠ ಸಿನಿಮಾದ ಕೆಲಸದಲ್ಲಿ ನಿರತರಾಗಿದ್ದಾಗ ಕೊನೆಯುಸಿರೆಳೆದಿದ್ದಾರೆ. ತುಮಕೂರಿನ ಉಪ್ಪಾರಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಗುಂಡುಮಣಿ ಅವರು ಸಿನೆಮಾ ಬೋರ್ಡ್ ಬರೆಯುವುದರಲ್ಲಿ ಎತ್ತಿದ ಕೈ. ಯಾವುದೇ ಗೋಡೆಗಳಲ್ಲಿ ಮುದ್ದಾದ ಅಕ್ಷರಗಳಿಂದ ಸಿನೆಮಾದ ಪ್ರಮೋಷನ್ ಮಾಡುವ ಪೇಂಟಿಂಗ್ ಮಾಡಿದ್ದಾರೆ ಎಂದರೆ ಅದನ್ನು ಗುಂಡುಮಣಿ ಅವರೇ ಬರೆದಿದ್ದಾರೆ ಎಂದರ್ಥ. ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಸಿನೆಮಾ ಪ್ರಚಾರದ ಪ್ರಮೋಷನ್ ಮಾಡಲು ಗೋಡೆ ಬರಹಕ್ಕಾಗಿ ಗುಂಡುಮಣಿ ಅವರು ತೆರಳುತ್ತಿದ್ದರು. ಇವರು ಬರೆದ ಗೋಡೆ ಬರಹದ ಜೊತೆ ಗುಂಡುಮಣಿ ಆರ್ಟ್ಸ್ ಎಂಬ ಬರಹವೂ ಇರುತ್ತಿತ್ತು.