ಹೈದರಾಬಾದ್: ದಿಲ್ ಸುಖ್ ನಗರದಲ್ಲಿ ಅವಳಿ ಬಾಂಬ್ ಸ್ಫೋಟ ಪ್ರಕರಣದ ದೋಷಿಗಳಾದ ಯಾಸೀನ್ ಭಟ್ಕಳ್ ಸೇರಿದಂತೆ 4 ಮಂದಿ ದೋಷಿಗಳಿಗೆ ಹೈದರಾಬಾದ್‍ನ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ವಿಶೇಷ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಡಿ.13 ರಂದು ಪ್ರಕರಣದ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದ್ದ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು. ಕರ್ನಾಟಕದ ಭಟ್ಕಳ ಮೂಲದ ಯಾಸೀನ್ ಜತೆಗೆ ಉಗ್ರರಾದ ಉತ್ತರ ಪ್ರದೇಶದ ಅಸಾದುಲ್ಲಾ ಅಖ್ತರ್, ಪಾಕಿಸ್ತಾನದ ಜಿಯಾ-ಉರ್-ರೆಹ್ಮಾನ್, ಬಿಹಾರದ ತಹ್ಸೀನ್ ಅಖ್ತರ್ ಮತ್ತು ಮಹಾರಾಷ್ಟ್ರದ ಏಜಾಜ್ ಶೇಖ್‍ಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಪ್ರಸ್ತುತ ದೋಷಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೃತ್ಯದ ರೂವಾರಿ ರಿಯಾಜ್ ಭಟ್ಕಳ್ ತಲೆಮರೆಸಿಕೊಂಡಿದ್ದು ಕರಾಚಿಯಲ್ಲಿ ಅಡಗಿದ್ದಾನೆ ಎಂದು ಶಂಕಿಸಲಾಗಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ. ರಿಯಾಜ್ ತನ್ನ ಬೆಂಬಲಿಗರಾದ ಅಸಾದುಲ್ಲಾ ಅಖ್ತರ್ ಮತ್ತು ವಕಾಸ್ ಮೂಲಕ ಮಂಗಳೂರಿನಲ್ಲಿ ಅಡಗಿ ಸ್ಫೋಟಕ್ಕೆ ಬೇಕಾದ ತಯಾರಿ ನಡೆಸುವಂತೆ ಸೂಚಿಸಿ ಅಗತ್ಯ ಹಣಕಾಸಿನ ನೆರವನ್ನು ನೀಡುತ್ತಿದ್ದ.
ಏನಿದು ಪ್ರಕರಣ?
2013ರ ಫೆಬ್ರವರಿ 21ರಂದು ಹೈದರಾಬಾದ್‍ನ ದಿಲ್‍ಸುಖ್‍ನಗರದಲ್ಲಿ ಅವಳಿ ಬಾಂಬ್ ಸ್ಪೋಟ ಪ್ರಕರಣದಲ್ಲಿ 18 ಮಂದಿ ಸಾವನ್ನಪ್ಪಿ 131 ಮಂದಿ ಗಾಯಗೊಂಡಿದ್ದರು. ದೋಷಿಗಳು ಹೈದರಾಬಾದ್ ಅಬ್ದುಲ್ಲಾಪುರ ಪ್ರದೇಶದಲ್ಲಿ ಬಾಂಬ್ ತಯಾರಿಸಿ ಸ್ಫೋಟಿಸಿ ಪರೀಕ್ಷಿಸಿದ್ದರು. ಇದಾದ ಬಳಿಕ ಫೆಬ್ರವರಿ 21ರಂದು ದಿಲ್‍ಸುಖ್ ನಗರದ ಎರಡು ಕಡೆ ಸೈಕಲ್‍ನಲ್ಲಿ ಬಾಂಬ್ ಇರಿಸಿ ಸ್ಫೋಟಿಸಿದ್ದರು.
ಎನ್‍ಐ ತನಿಖೆ ನಡೆಸಿ ಐಪಿಸಿಯ ವಿವಿಧ ಸೆಕ್ಷನ್, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿಯಲ್ಲಿ ಚಾರ್ಜ್‍ಶೀಟ್ ಸಲ್ಲಿಸಿತ್ತು. ಇಂಡಿಯನ್ ಮುಜಾಹಿದೀನ್ ಕೃತ್ಯ ಸಾಬೀತಾದ ಮೊದಲ ಪ್ರಕರಣ ಇದಾಗಿದ್ದ ಹಿನ್ನೆಲೆಯಲ್ಲಿ ಎನ್‍ಐಎ ಕೋರ್ಟ್‍ನಲ್ಲಿ ದೋಷಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ಮನವಿ ಮಾಡಿತ್ತು.