ಚೆನ್ನೈ: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ರನ್ ಗಳಿಕೆಯಲ್ಲಿ ಐತಿಹಾಸಿಕ ದಾಖಲೆ ಮಾಡಿದೆ. ಒಂದೇ ಇನ್ನಿಂಗ್ಸ್ ನಲ್ಲಿ 759 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ಗರಿಷ್ಠ ಮೊತ್ತವನ್ನು ದಾಖಲಿಸಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕನ್ನಡಿಗರಾದ ಕರುಣ್ ನಾಯರ್ ಹಾಗೂ ರಾಹುಲ್ ಆಟದ ಮೂಲಕ ಭಾರತ ಈ ವಿಶಿಷ್ಟ ದಾಖಲೆ ಮಾಡಿದೆ.
ಭಾರತ ಟಾಪ್ 10 ಸ್ಕೋರ್ ಗಳಿಸಿದ 10 ಪಂದ್ಯಗಳಲ್ಲಿ 5 ಪಂದ್ಯ ಡ್ರಾ ಆದರೆ, 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಚೆನ್ನೈ ಟೆಸ್ಟ್‍ನಲ್ಲಿ ನಾಳೆ ಕೊನೆಯ ದಿನವಾಗಿದ್ದು ಸ್ಪಷ್ಟ ಫಲಿತಾಂಶ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಟೀಮ್ ಇಂಡಿಯಾ ಟಾಪ್ 10 ರನ್ಸ್
ಇಂದು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಕರುಣ್ ನಾಯರ್ ಅವರು ತ್ರಿಶತಕ ಗಳಿಸುತ್ತಿದ್ದಂತೆಯೇ 7 ವಿಕೆಟ್ ನಷ್ಟಕ್ಕೆ 759 ರನ್ ಗಳಿಸಿತ್ತು. ಈ ಮೂಲಕ ಇನ್ನಿಂಗ್ಸ್ ಒಂದರಲ್ಲಿ ಭಾರತದ ಅತ್ಯಧಿಕ ಮೊತ್ತ ಎಂಬ ದಾಖಲೆಗೆ ಟೀಂ ಇಂಡಿಯಾ ಪಾತ್ರವಾಯಿತು. ಈ ಹಿಂದೆ ಭಾರತ ಶ್ರೀಲಂಕಾ ವಿರುದ್ಧ 2009ರಲ್ಲಿ 726/9 ಗಳಿಸಿದ್ದು, ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು.
2010ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ 707, 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ 705/7, 1986ರಲ್ಲಿ ಶ್ರೀಲಂಕಾ ವಿರುದ್ಧ ಕಾನ್ಪುರದಲ್ಲಿ 676/7, 2004ರಲ್ಲಿ ಪಾಕಿಸ್ತಾನ ವಿರುದ್ಧ ಮುಲ್ತಾನ್‍ನಲ್ಲಿ 675/5 ಡಿಕ್ಲೇರ್, 2007ರಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್‍ನಲ್ಲಿ 664, 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದಲ್ಲಿ 657/7 ಡಿಕ್ಲೇರ್, 1979ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಾನ್ಪುರದಲ್ಲಿ 644/7 ಡಿಕ್ಲೇರ್, 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದಲ್ಲಿ 643/6 ಡಿಕ್ಲೇರ್. ಇವಿಷ್ಟು ಭಾರತದ ಟಾಪ್ 10 ಅತ್ಯುತ್ತಮ ಟೆಸ್ಟ್ ಸ್ಕೋರ್‍ಗಳು.