– ಚೆನ್ನೈ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು
– ತಮಿಳುನಾಡು ಗಡಿಭಾಗದಲ್ಲಿ ಕಟ್ಟೆಚ್ಚರ
ಬೆಂಗಳೂರು: ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಹದಗೆಟ್ಟಿರೋದ್ರಿಂದ ಕರ್ನಾಟಕದಲ್ಲೂ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ. ನಗರದಲ್ಲಿ ತಮಿಳಿಗರು ಹೆಚ್ಚಾಗಿರೋ ಪ್ರದೇಶಗಳಲ್ಲಿ ಬಂದೋಬಸ್ತ್ ಏರ್ಪಡಿಲಾಗಿದೆ. ಭದ್ರತೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು ಗೃಹ ಸಚಿವರು ಕೂಡ ಮಾಹಿತಿ ಪಡೆದಿದ್ದಾರೆ.
ತಮಿಳುನಾಡಿನ ಗಡಿ ಪ್ರದೇಶವಾದ ಆನೇಕಲ್, ಚಾಮರಾಜನಗರದ ಕೊಳ್ಳೇಗಾಲ, ರಾಮನಗರ, ಕನಕಪುರ, ಹೊಗೇನಕಲ್‍ನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೋಲಾರದ ಕೆಜಿಎಫ್‍ನಲ್ಲಿ ತಮಿಳು ಭಾಷಿಕರು ಹಾಗೂ ಅಮ್ಮ ಅಭಿಮಾನಿಗಳು ಹೆಚ್ಚಾಗಿರೋದ್ರಿಂದ ಖುದ್ದು ಕೋಲಾರ ಎಸ್‍ಪಿ ದಿವ್ಯಾಗೋಪಿನಾಥ್ ರೌಂಡ್ಸ್ ಹೊಡೆದು ಪರಿಸ್ಥಿತಿ ಅವಲೋಕಿಸಿದ್ದಾರೆ.
ರೈಲು ಸಂಚಾರ ರದ್ದು: ತಮಿಳುನಾಡಿನಲ್ಲಿ ಪರಿಸ್ಥಿತಿ ಹದಗೆಟ್ಟಿರೋದ್ರಿಂದ ಬೆಂಗಳೂರಿನಿಂದ ರಾತ್ರಿ ಹೊರಡಬೇಕಿದ್ದ ಚೆನ್ನೈ ಎಕ್ಸ್‍ಪ್ರೆಸ್ ರೈಲು ಸಂಚಾರ ರದ್ದಾಗಿದೆ. ಹೊಸೂರು, ವೇಲೂರು ಚೆನ್ನೈ-ಕೃಷ್ಣಗಿರಿ ಕಡೆಗಳ ಪರಿಸ್ಥಿತಿ ನೋಡಿ ಬಸ್ ಸಂಚಾರ ನಡೆಸೋದಾಗಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿಗೆ ಹೋಗಿರೋ ಪ್ರವಾಸಿಗರನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ತಮಿಳುನಾಡು ಪೊಲೀಸರು ಸಹ ಕರ್ನಾಟಕದ ವಾಹನಗಳನ್ನ ವಾಪಸ್ ಕಳುಹಿಸುತ್ತಿದ್ದಾರೆ. ಕಾವೇರಿ ಕೊಳ್ಳದ ಮಂಡ್ಯದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರಿನಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕರ್ನಾಟಕ ತಮಿಳುನಾಡು ಗಡಿಭಾಗವಾದ ಆನೇಕಲ್‍ನ ಅತ್ತಿಬೆಲೆ ಹಾಗೂ ಹೊಸೂರು ಸೂಕ್ಷ್ಮ ಪ್ರದೇಶ. ಎರಡು ರಾಜ್ಯಗಳ ಮಧ್ಯೆ ಗಲಾಟೆಗಳಾದ ಈ ಜಾಗದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗುತ್ತೆ. ಈಗ ಅಮ್ಮನ ಆರೋಗ್ಯ ಹದಗೆಟ್ಟಿರೋದ್ರಿಂದ ಅತ್ತಿಬೆಲೆ ಹಾಗೂ ಹೊಸೂರಿನಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದ್ದಾರೆ.
ಇನ್ನು ಕಳೆದ ರಾತ್ರಿ ಬೆಂಗಳೂರಿನ ಎಐಎಡಿಎಂಕೆ ಕಚೇರಿ ಬಳಿ ಕಾರ್ಯಕರ್ತರು ಅಮ್ಮನ ಫೋಟೋ ಇಟ್ಟು ಪೂಜೆ ಮಾಡಿದರು. ಶೀಘ್ರ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸಿದರು.