ಚಿಕ್ಕಮಗಳೂರು: ಸಾಮಾನ್ಯವಾಗಿ ಕ್ರೀಡೆಗೆ ಮೊದಲೋ, ಸಂದರ್ಶನಕ್ಕೆ ಮೊದಲೋ ಪ್ರ್ಯಾಕ್ಟೀಸ್ ಮಾಡುತ್ತೇವೆ. ಆದರೆ ಇಲ್ಲೊಂದು ಕಳ್ಳರ ತಂಡ ಕೋಟಿ ಕೋಟಿ ದೋಚೋ ಮೊದಲು ಸಾವಿರ ರೂಪಾಯಿ ದೋಚಿ ಪ್ರ್ಯಾಕ್ಟಿಸ್ ಮಾಡಿದ್ದಾರೆ. 6 ತಿಂಗಳ ಫರ್ಫೆಕ್ಟ್ ಪ್ಲಾನಿಂಗ್ ಬಳಿಕ ದೊಡ್ಡ ಬೇಟೆಯನ್ನೇ ಆಡಿದ್ದರು. ಆದರೆ ಇವರ ಅದೃಷ್ಟ ಮಾತ್ರ ನೆಟ್ಟಗಿರಲಿಲ್ಲ. ಈಗ ಇವರೆಲ್ಲಾ ಚಿಕ್ಕಮಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಇದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ರೋಚಕ ರಾಬರಿ ಕಥೆ. ಸಣ್ಣ ಪುಟ್ಟ ಕಳ್ಳತನ ಮಾಡಿ ಬೇಸತ್ತಿದ್ದ 8 ಮಂದಿ ಖತರ್ನಾಕ್ ಕಳ್ಳರ ತಂಡವೊಂದು ಲೈಫಲ್ಲಿ ಒಮ್ಮೆಲೆ ಸೆಟ್ಲ್ ಆಗಲು ದೊಡ್ಡ ಪ್ಲ್ಯಾನ್ ಮಾಡಿಕೊಂಡಿತ್ತು. ಪರೀಕ್ಷಾರ್ಥವಾಗಿ ಹಾಸನ ಜಿಲ್ಲೆಯ ಬಾಣಾವರದಲ್ಲಿ ಚಿನ್ನದಂಗಡಿ ದೋಚಿದ್ದ ತಂಡಕ್ಕೆ ಅಲ್ಲಿ ಸಿಕ್ಕಿದ್ದು ಹತ್ತೇ ಗ್ರಾಂ ಚಿನ್ನ. ಆದರೂ ದೊಡ್ಡ ದರೋಡೆಗೆ ರಿಹರ್ಸಲ್ ಮಾಡಿಕೊಂಡಿದ್ದರು.
ರಿಹರ್ಸಲ್ ಬಳಿಕ ಸೆಪ್ಟೆಂಬರ್ 24ರಂದು ಚಿಕ್ಕಮಗಳೂರಿನ ಮಣಪ್ಪುರಂ ಗೋಲ್ಡ್ ಲೋನ್‍ಗೆ ಕನ್ನ ಹಾಕಿ ನಾಲ್ಕುವರೆ ಕೋಟಿಗೂ ಅಧಿಕ ಮೊತ್ತದ ಚಿನ್ನ, ಬೆಳ್ಳಿ ಹಾಗೂ ನಗದನ್ನ ದೋಚಿ ಪರಾರಿಯಾಗಿದ್ದರು. ಕದ್ದ ದುಡ್ಡಲ್ಲಿ ಮೂರು ಕಾರು ಹಾಗೂ ಮೈಸೂರಿನಲ್ಲಿ ಮನೆ ಖರೀದಿಸಿದ್ದರು. ಎರಡು ತಿಂಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರೋರಾತ್ರಿ ಸಿರಿವಂತರಾಗೋ ಕನಸು ಕಂಡ ಖತರ್ನಾಕ್ ಕಳ್ಳರಾದ ಇರ್ಫಾನ್, ಮುಕ್ರಂ, ಮಹಮ್ಮದ್ ಹನೀಫ್, ಅಕ್ಮಲ್ ಪಾಷಾ, ಸಲ್ಮಾನ್, ಮೈಸೂರಿನ ಮಹಮ್ಮದ್ ಸಮೀವುಲ್ಲಾ ಹಾಗೂ ಕೇಶವ ಈಗ ಜೈಲಲ್ಲಿ ಮುದ್ದೆ ಮುರೀತಿದ್ದಾರೆ.