ಬೆಂಗಳೂರು: ಹೆಬ್ಬಾಳ ಉಪಚುನಾವಣೆಗಾಗಿ ಮತದಾರರ ಮನವೊಲಿಸಲು ಕಮಲ ಮತ್ತು ಕೈ ಪಕ್ಷದಿಂದ ನಡೆಯುತ್ತಿರುವ ಪ್ರಚಾರದ ಭರಾಟೆ ಜೋರಾಗಿದೆ. ಆದರೆ ಪ್ರಚಾರದ ವೇಳೆ ಮೆರವಣಿಗೆಯಲ್ಲಿ ಪಕ್ಷಗಳ ಕಾರ್ಯಕರ್ತರು ಹೆಲ್ಮೆಟ್ ಧರಿಸಿ ಪ್ರಚಾರ ನಡೆಸಿದ್ದಾರೆ.
ಇಂದು ಸಂಜಯ್ ನಗರದ ರಾಧಾಕೃಷ್ಣ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ್ ಸ್ವಾಮಿ ಪರವಾಗಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಶಾಸಕ ಅಶ್ವಥ್ ನಾರಾಯಣ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಸಂಜಯ್ ನಗರದ ರಾಧಾಕೃಷ್ಣ ದೇವಸ್ಥಾನದಿಂದ ಪ್ರಚಾರ ಆರಂಭವಾಗಿ ಕಾರ್ಯಕರ್ತರಿಂದ ಬೈಕ್‍ನಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಬುಲೆಟ್ ಓಡಿಸಿ ಬೈಕ್ ಮೆರವಣಿಗೆಗೆ ಡಿವಿಎಸ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸಿದರು. ಅಲ್ಲದೇ ಈ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ, ನಟ ಜಗ್ಗೇಶ್ ಸಹ ಭಾಗಿಯಾಗಿದ್ದರು.
ಇತ್ತ ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್ ಪರವಾಗಿ ಬಿ.ಕೆ ಹರಿಪ್ರಸಾದ್ ಪಾದಯಾತ್ರೆ ಮಾಡುವ ಮೂಲಕ ಮತ ಯಾಚಿಸಿದರು. ಈ ವೇಳೆ ಮಾತನಾಡಿದ ಅವರು ಬಿಜೆಪಿ ಕುತಂತ್ರದ ಪ್ರಚಾರ ಮಾಡ್ತಿದೆ. ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಬಿಜೆಪಿಯ ಹಾಗೆ ಮೋದಿ ಫೋಟೋ ಇಟ್ಕೊಂಡು ಮತ ಕೇಳಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಾರಿಗೆ ಸಚಿವರಿಗೆ ಹೆಲ್ಮೆಟ್ ಇಲ್ಲ: ಬಿಜೆಪಿ ಕಾರ್ಯಕರ್ತರ ಬೈಕ್ ಮೆರವಣಿಗೆಗೆ ಚಾಲನೆ ನೀಡಿದ ಡಿವಿ ಸದಾನಂದಗೌಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿದರು. ಆದರೆ ಎಲ್ಲರೂ ಹೆಲ್ಮೆಟ್ ಹಾಕಿ ಬೈಕ್ ಮೆರವಣಿಗೆ ಮಾಡಬೇಕು ಎಂದಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಕಾರ್ಯಕರ್ತರ ಬೈಕ್ ಮೆರವಣಿಗೆಗೆ ಆಗಮಿಸಿ ಹೆಲ್ಮೆಟ್ ತರದಿದ್ದರಿಂದ ಮುಜುಗರ ಅನುಭವಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಹೆಲ್ಮೆಟ್ ಹಾಕಿರಲಿಲ್ಲವಾದ್ದರಿಂದ ಸಾರಿಗೆ ಸಚಿವರಾಗಿ ನಾನು ಏನು ಉತ್ತರ ಕೊಡಲಿ? ನಾನು ಭಾಗವಹಿಸಲ್ಲ ಎಂದು ಹೇಳಿ ವಾಪಾಸ್ ಹೋದರು.