ಹೈದ್ರಾಬಾದ್: ಇವತ್ತು ತಿಂಗಳ ಕೊನೇ ದಿನ. ಎಲ್ಲಾ ಸರ್ಕಾರಿ ನೌಕರರಿಗೂ ಸಂಬಳವಾಗುವ ದಿನ. ಈಗ ಸಂಬಳವನ್ನ ಹೇಗೆ ಪಡೆಯೋದು ಅನ್ನೋ ಚಿಂತೆ ಬಿದ್ದಿದೆ. ಕರ್ನಾಟಕ ಸರ್ಕಾರಿ ನೌಕರರ ಸಂಘ ಈಗಾಗ್ಲೇ ನಗದು ರೂಪದಲ್ಲೇ ಸಂಬಳ ನೀಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಎಟಿಎಂಗಳಲ್ಲಿ ಹಣ ಸಿಗ್ತಿಲ್ಲ. ಬ್ಯಾಂಕ್‍ಗಳಲ್ಲೂ ಹಣದ ಕೊರತೆ ಉದ್ಭವಿಸಿದೆ. ಜೊತೆಗೆ ಖಾತೆಯಲ್ಲಿ 24 ಸಾವಿರ ರುಪಾಯಿ ಮೇಲೆ ಪಡೆಯಲು ಆಗ್ತಿಲ್ಲ. ಇದನ್ನ ಬಿಟ್ರೆ ನಾಳೆಯಿಂದ 10 ದಿನ ಖಾಸಗಿ ಕಂಪನಿಗಳು ಸಂಬಳ ನೀಡಲಿವೆ. ಗಾರ್ಮೆಂಟ್ಸ್‍ನಿಂದ ಹಿಡಿದು ಸಣ್ಣ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೂ ಸಂಬಳ ನೀಡುವುದು ಹೇಗೆ ಅನ್ನೋ ಚಿಂತೆ ಶುರುವಾಗಿದೆ. ಇದನ್ನೆಲ್ಲಾ ನೋಡಿದ್ರೆ ಮತ್ತೆ ಎಟಿಎಂಗಳ ಮುಂದೆ, ಬ್ಯಾಂಕ್‍ಗಳ ಮುಂದೆ ಜನ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗೋದು ಖಚಿತ.
ಇದು ನಮ್ಮ ರಾಜ್ಯದ ಪರಿಸ್ಥಿತಿಯಾದ್ರೆ ತೆಲಂಗಾಣ ಸರ್ಕಾರ ತನ್ನ ಎಲ್ಲಾ ಸರ್ಕಾರಿ ನೌಕರರಿಗೂ ನಗದು ರೂಪದಲ್ಲಿ ಸಂಬಳ ನೀಡಲು ನಿರ್ಧರಿಸಿದೆ. ಪ್ರತಿಯೊಬ್ಬರ ಸಂಬಳ ಎಷ್ಟೇ ಇರಲಿ ಎಲ್ಲರಿಗೂ 10 ಸಾವಿರ ರುಪಾಯಿಯನ್ನು ನಗದು ರೂಪದಲ್ಲಿ ಕೊಡುತ್ತಿದ್ದು, ಉಳಿದ ಸಂಬಳವನ್ನು ಬ್ಯಾಂಕ್‍ಗೆ ಜಮೆ ಮಾಡಲಿದೆ. ರಾಜ್ಯ ಹಣಕಾಸು ಇಲಾಖೆಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.
ಕೇಂದ್ರಕ್ಕೆ ಪತ್ರ ಬರೆದ ಕೇರಳ ಸರ್ಕಾರ: ಕೇರಳದಲ್ಲಿ ನೋಟುಗಳ ಕೊರತೆ ಉಂಟಾಗಿದೆ. ಹೀಗಾಗಿ ಕೇರಳ ಸರ್ಕಾರ ಕೇಂದ್ರ ಹಣಕಾಸು ಇಲಾಖೆಗೆ ಪತ್ರ ಬರೆದಿದೆ. ಸಂಬಳ, ಪಿಂಚಣಿ ನೀಡಲು 1200 ಕೋಟಿ ರೂ. ತಕ್ಷಣ ಬಿಡುಗಡೆ ಮಾಡುವಂತೆ ಪತ್ರ ಬರೆದಿದೆ.
ಕೇರಳ ಹಣಕಾಸು ಸಚಿವ ಟಿ.ಎಂ.ಥಾಮಸ್ ಇಸಾಖ್ ರಾಜ್ಯದಲ್ಲಿ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ನೀಡಲು ರಾಜ್ಯ ಹಣಕಾಸು ಬೊಕ್ಕಸದಲ್ಲಿ ನೋಟುಗಳ ಕೊರತೆಯಾಗಿದ್ದು, ಶೀಘ್ರವೇ ರಾಜ್ಯ ಸರ್ಕಾರಕ್ಕೆ 1200 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಹೀಗೆ ನೆರೆಯ ರಾಜ್ಯ ಸರ್ಕಾರಗಳು ಜನರನ್ನು ಹಣದ ತೊಂದರೆಯಿಂದ ತಪ್ಪಿಸಲು ಬೇರೆ ಮಾರ್ಗಗಳನ್ನು ಕಂಡುಕೊಂಡಿದ್ದರೆ. ಆದ್ರೆ ಕರ್ನಾಟಕ ರಾಜ್ಯ ಸರ್ಕಾರ ಇನ್ನೂ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ.